ಶೃಂಗೇರಿ: ಗ್ರಾಹಕರು ಸಮಸ್ಯೆಗಳನ್ನು ಇಲಾಖೆಗೆ ಜತೆ ಹಂಚಿಕೊಂಡಾಗ ಮಾತ್ರ ಶೀಘ್ರ ಪರಿಹಾರ ನೀಡಬಹುದು. ಗ್ರಾಹಕರು ಮತ್ತು ಇಲಾಖೆ ಸಂಬಂಧ ಉತ್ತಮವಾಗಿದ್ದಾಗ ಇಲಾಖೆ ತಕ್ಷಣ ಕಾರ್ಯನಿರ್ವಹಿಸಲು ಸಾಧ್ಯ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಸಿದ್ದೇಶ್ ಹೇಳಿದರು.
ಮೆಸ್ಕಾಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ತಾಲೂಕು ರೈತ ಸಂಘದ ಗೌರವಾಧ್ಯಕ್ಷ ಕೆಲವಳ್ಳಿ ಗುಂಡಪ್ಪ ಮಾತನಾಡಿ, ಕಮ್ಮರಡಿಯಿಂದ ಶೃಂಗೇರಿಗೆ ಬರುವ 110 ಕೆ.ವಿ ಲೈನ್ ಹಾಗೂ 33 ಕೆ.ವಿ ವಿದ್ಯುತ್ ಸ್ಥಾವರದ ಪ್ರಗತಿ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕಿನಲ್ಲಿ ಹಲವು ತೋಟಗಳ ನಡುವೆ ವಿದ್ಯುತ್ ಲೈನ್ ಹಾದು ಹೋಗಿದ್ದು, ಮಳೆಗಾಲದಲ್ಲಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ರಸ್ತೆ ಬದಿ ಕಂಬಗಳನ್ನು ಅಳವಡಿಸಿ ಅಲ್ಲಿರುವ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದೇಶ್, ಕಮ್ಮರಡಿಯಿಂದ ಶೃಂಗೇರಿಗೆ 110 ಕೆ.ವಿ ವಿದ್ಯುತ್ ಲೈನ್ ಮಾಡುವ ಅಗತ್ಯವಿದೆ. ಜಾಗದ ಸಮಸ್ಯೆ ಇತ್ಯರ್ಥವಾದಲ್ಲಿ ಕೂಡಲೇ ಲೈನ್‌ನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಕಮ್ಮರಡಿಯಿಂದ ಶೃಂಗೇರಿಗೆ 33 ಕೆ.ವಿ ವಿದ್ಯುತ್ ಸ್ಥಾವರದ ಕೆಲಸವಾಗುತ್ತಿದೆ. ತಾಲೂಕಿನಲ್ಲಿ ಟಿಸಿ ಅಳವಡಿಸಲು ಇಲಾಖೆಗೆ ತಗಲುವ ವೆಚ್ಚದ ಶೇ.10 ಹಣ ಸಂಬಂಧಪಟ್ಟವರು ನೀಡಬೇಕು. ಹಳೇ ತಂತಿಗಳು ಹಾಗೂ ಕಂಬಗಳನ್ನು ಅಳವಡಿಸುವ ಕುರಿತು ಗ್ರಾಹಕರ ಬೇಡಿಕೆ ಇದ್ದರೆ ಕೂಡಲೇ ಸ್ಪಂದಿಸುತ್ತೇವೆ ಎಂದು ತಿಳಿಸಿದರು.
ರೈತ ಸಂಘದ ಪದಾಧಿಕಾರಿ ತೆಕ್ಕೂರು ಚಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ನೂತನ ವಿದ್ಯುತ್ ಸ್ಥಾವರ ಅಳವಡಿಸುವಂತೆ 2014ರಿಂದ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದೇವೆ. ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ವಿದ್ಯುತ್ ನಿಲುಗಡೆಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ಗೃಹಿಣಿಯರಿಗೆ ತೊಂದರೆಯಾಗುತ್ತಿದೆ. ಬೆಳಗ್ಗೆ 8 ಗಂಟೆ ಬಳಿಕ ವಿದ್ಯುತ್ ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್, ಪದಾಧಿಕಾರಿ ಮೆಣಸೆ ಚೆನ್ನಕೇಶವ, ಅನಂತಯ್ಯ, ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಲೋಕೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿ.ದೀಪಕ್, ಸಹಾಯಕ ಇಂಜಿನಿಯರ್ ಪ್ರೀತಮ್, ಸಿಬ್ಬಂದಿ ರಾಜಪ್ಪ, ರಾಮಚಂದ್ರ ಮತ್ತು ತಾಂತ್ರಿಕ ಶಾಖೆ ಪ್ರಭಾರ ಎಇಇ ಧನಂಜಯ ಇದ್ದರು.