ಜಿಲ್ಲೆ

ಸಿನಿಮಾ ಹೀರೊ ಸ್ಟೈಲ್ ಬಿಟ್ಬಿಡಿ ವಾಹನ ಚಾಲಕರಿಗೆ ಎಸ್‌ಪಿ ವಾರ್ನಿಂಗ್

Udupi

ಉಡುಪಿ: ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಡ್ರಗ್ಸ್ ಬಳಕೆ ವಿರುದ್ಧ ಉಡುಪಿ ಪೊಲೀಸರು ಸೋಮವಾರ ಸಾಯಂಕಾಲ ದಿಢೀರ್ ಕಾರ್ಯಚರಣೆ ಕೈಗೊಂಡು ಸವಾರರಿಗೆ ಬಿಸಿ ಮುಟ್ಟಿಸಿದರು.

ಕಲ್ಸಂಕ ವೃತ್ತದಲ್ಲಿ ನಗರ ಪೊಲೀಸ್ ಠಾಣೆ, ನಗರ ಸಂಚಾರ ಪೊಲೀಸರು ನಾಲ್ಕು ದಿಕ್ಕಿನಲ್ಲಿಯೂ ವಾಹನ ತಪಾಸಣೆ ನಡೆಸಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಾಹನ ಚಾಲಕರು, ಸವಾರರಿಗೆ ಬಿಸಿ ಮುಟ್ಟಿಸಿ 5 ರಿಂದ 7 ಗಂಟೆ ಅವಧಿಯಲ್ಲಿ ಬರೋಬ್ಬರಿ 115 ಕೇಸು ಹಾಕಿ 65 ಸಾವಿರ ದಂಡ ವಸೂಲಿ ಮಾಡಿದರು. ವಾಹನಗಳ ಕರ್ಕಶ ಹಾರ್ನ್, ಕಾರಿನ ಟಿಂಟ್ ಗ್ಲಾಸ್, ಆಟೋರಿಕ್ಷಾ, ಕಾರು, ಬೈಕ್‌ಗಳಿಗೆ ನೀಲಿ ಲೈಟ್‌ಗಳ ಅಳವಡಿಕೆ, ಕಾರು, ಬೈಕ್‌ಗಳಿಗೆ ವಿವಿಧ ಭಾಗವನ್ನು ಆಕರ್ಷಕ ರೀತಿಯಲ್ಲಿ ಬದಲಾಯಿಸಿದ ಸವಾರರಿಗೆ ದಂಡದ ಬಿಸಿ ಮುಟ್ಟಿಸಿ, ಸ್ಥಳದಲ್ಲಿಯೇ ಕಿತ್ತೆಸೆದರು. ಪೊಲೀಸರು ಕಾರು, ಬೈಕ್‌ಗಳಲ್ಲಿ ಡ್ರಗ್ಸ್ ತಪಾಸಣೆಯನ್ನು ವಿಶೇಷವಾಗಿ ನಡೆಸಿದರು.

ಬೈಕ್‌ಗಳಿಗೆ ಹೆಡ್‌ಲೈಟ್‌ಗೆ ನೀಲಿ ಲೈಟ್ ಹಾಕಿಸಿ ಓಡಿಸುತ್ತಿದ್ದ ಸವಾರರಿಗೆ ‘ಸಿನಿಮಾ ಹೀರೊಗಳ ಸ್ಟೈಲ್‌ಗಳನ್ನು ಬಿಟ್ಟು ಬಿಡಬೇಕು. ನಿಯಮ ಪ್ರಕಾರ ವಾಹನಗಳನ್ನು ಬಳಕೆ ಮಾಡಬೇಕು. ವಾಹನಗಳಿಗೆ ಈ ರೀತಿ ಲೈಟ್‌ಗಳ ಆಕರ್ಷಣೆ, ಕರ್ಕಶ ಹಾರ್ನ್ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ, ಅಪಘಾತಕ್ಕೆ ಆಹ್ವಾನ ಕೊಡಬಾರದು’ ಎಂದು ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಖಡಕ್ ಎಚ್ಚರಿಕೆ ನೀಡಿದರು.

ಸ್ವತಃ ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಕುಮಾರಚಂದ್ರ ವಾಹನಗಳ ತಪಾಸಣೆ ನಡೆಸಿದರು. ಡಿವೈಎಸ್ಪಿ ಜೈಶಂಕರ್, ನಗರಠಾಣೆ ಎಸ್‌ಐ ಶಕ್ತಿವೇಲು, ಸಂಚಾರ ಠಾಣೆ ಖಾದರ್ ಷಾ ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದರು. ಸಂಚಾರ ಪೊಲೀಸರು 80 ಕೇಸು ದಾಖಲಿಸಿ 40 ಸಾವಿರ ರೂ. ದಂಡ ವಿಧಿಸಿದರೆ, ನಗರ ಠಾಣೆ ಪೊಲೀಸರು 35 ಕೇಸು ದಾಖಲಿಸಿ 25 ಸಾವಿರ ರೂ. ದಂಡ ವಿಧಿಸಿದರು.