ಜಿಲ್ಲೆ

ಡಿಎಲ್, ವಿಮೆ ಇಲ್ಲದೆ ವಾಹನ ಚಲಾಯಿಸಬೇಡಿ ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಸಲಹೆ

ತಿಪಟೂರು : ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಅಭಿಯಾನದ ಪ್ರಯುಕ್ತ ನಗರದಲ್ಲಿ ಎಸ್‌ಪಿ ಕೆ.ವಂಶಿಕೃಷ್ಣ ಸೋಮವಾರ ಮನೆಮನೆಗೆ ತೆರಳಿ ವಾಹನಗಳ ಬಗ್ಗೆ ಮಾಹಿತಿ ಪಡೆದು ಹಾಗೂ ದಾಖಲಾತಿ ಪರಿಶೀಲನೆ ನಡೆಸಿದರು.

ವಾಹನದ ಮಾಲೀಕತ್ವ ಹೊಂದಿದ್ದರೂ, ವಾಹನ ಚಲಾಯಿಸಲು ಅಶಕ್ತರಿದ್ದಲ್ಲಿ ವಾಹನದ ಮಾಲೀಕತ್ವ ಬದಲಾಯಿಸಿಕೊಳ್ಳಿ ಎಂದು ಎಸ್‌ಪಿ ಕೆ.ವಂಶಿಕೃಷ್ಣ ಸಲಹೆ ನೀಡಿದರು.

ದೊಡ್ಡಪೇಟೆಯ ಎನ್.ರುದ್ರಮುನಿ ಎಂಬುವರು ಕಾರು ಮಾಲೀಕರಾಗಿದ್ದು, ಅಶಕ್ತರಾಗಿರುವ ಕಾರಣ ಅವರ ಮಗ ಕಾರು ಚಲಾಯಿಸುತ್ತಿರುವ ವಿವರ ತಿಳಿದುಕೊಂಡ ಅವರು, ತಕ್ಷಣ ಮಾಲೀಕತ್ವವನ್ನು ಮಗನ ಹೆಸರಿಗೆ ಬದಲಿಸಿ ಎಂದು ಸಲಹೆ ನೀಡಿದರು.

18 ವರ್ಷದೊಳಗಿನ ಮಕ್ಕಳು ಬೈಕ್ ಓಡಿಸಿ ಸಿಕ್ಕಿ ಬಿದ್ದರೆ ವಾಹನದ ಮಾಲೀಕರ ಮೇಲೆ ಕೇಸ್ ದಾಖಲಾಗುವುದು. ಹಾಗೂ ಸೂಕ್ತ ದಾಖಲೆ ಇಲ್ಲದೇ ವಾಹನ ಚಲಾಯಿಸಿ, ಐಎಂಎ ಕೇಸ್ ದಾಖಲಾದರೆ ಮುಂದಿನ ದಿನಗಳಲ್ಲಿ ನೌಕರಿ ಗಿಟ್ಟಿಸಲು ಅಡಚಣೆ ಉಂಟಾಗುತ್ತೆ ಎಂದು ಎಚ್ಚರಿಸಿದರು. ಡಿಎಲ್, ವಿಮೆ, ಇಲ್ಲದೇ ವಾಹನ ಚಲಾಯಿಸಬೇಡಿ ಮತ್ತು ಮನೆಯಿಂದ ಹೊರಗೆ ಹೋಗುವ ವೇಳೆ 112 ಸಹಾಯವಾಣಿ ಮೂಲಕ ಮನೆಗೆ ಎಲ್.ಎಚ್.ಎಂ.ಎಸ್. ಅಳವಡಿಸಿಕೊಳ್ಳುವ ಮೂಲಕ ಕಳ್ಳರಿಂದ ರಕ್ಷಣೆ ಪಡೆಯಿರಿ ಎಂದರು.

ರಸ್ತೆ ಸುರಕ್ಷತೆ ಅರಿವು: ಮಂಗಳವಾರ ನಗರದ ಕಲ್ಪತರು ಆಡಿಟೋರಿಯಂನಲ್ಲಿ ಆಟೋ, ಗೂಡ್ಸ್. ಮತ್ತು ಲಾರಿ ಚಾಲಕರಿಗೆ ರಸ್ತೆ ಸುರಕ್ಷತೆ ಅರಿವು ಮತ್ತು ದೃಷ್ಟಿ ಪರೀಕ್ಷೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಸ್ತೆ ಸುರಕ್ಷತೆ ಎಂದರೆ ಅಪಘಾತ ತಡೆಯುವುದರ ಜತೆಗೆ ನಂತರದ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಎಂದು ಬಿಜೆಪಿ ಮುಖಂಡ ಲೋಕೇಶ್ವರ್ ಹೇಳಿದರು. ದೇಶದಲ್ಲಿ ಮಾರಕ ಕ್ಯಾನ್ಸರ್‌ನಿಂದ ವಾರ್ಷಿಕ ಒಂದೂವರೆ ಲಕ್ಷ ಮಂದಿ ಸಾಯುತ್ತಿದ್ದರೆ. ಒಂದೂವರೆ ಲಕ್ಷ ಮಂದಿ ರಸ್ತೆ ಅಪಘಾತಗಳಿಂದ ಸಾಯುತ್ತಿದ್ದಾರೆ. ರಸ್ತೆ ನಿಯಮ ಉಲ್ಲಂಘನೆ, ಹೆಲ್ಮೆಟ್, ಚಾಲನಾ ಪರವಾನಗಿ ಮತ್ತು ವಿಮೆ ಇಲ್ಲದೇ ಅಪಘಾಕ್ಕೀಡಾದರೆ ನಯೆಪೈಸಿ ವಿಮೆ ಹಣ ಸಿಗಲ್ಲ. ಆದ್ದರಿಂದ ಅಗತ್ಯ ದಾಖಲೆಗಳೊಂದಿಗೆ ವಾಹನ ಚಲಾಯಿಸಿ ಎಂದರು.

ಕಲ್ಪತರು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಟಿ.ಎಂ.ಶಿವಣ್ಣ, ರಾಷ್ಟ್ರೀಯ ರಸ್ತೆ ಸುರಕ್ಷಾ ವಿಭಾಗದ ಇಂಜಿನಿಯರ್ ವಿಜಯ್ ರಾಘವ್, ಗ್ರಾಮಾಂತರ ವೃತ್ತ ನಿರೀಕ್ಷಕಿ ಜಯಲಕ್ಷ್ಮೀ. ಎಸ್‌ಐ ದಾಕ್ಷಾಯಿಣಿ, ಎಎಸ್‌ಐ ನಿಸಾರ್ ಅಹ್ಮದ್ ಇದ್ದರು.

ರಾಜ್ಯದ ಅಪಘಾತ ವಲಯ ಎಂಬ ಕಳಂಕ ಜಿಲ್ಲೆಗೆ ಬಂದಿದ್ದು, ಚಾಲನಾ ಪರವಾನಗಿ, ವಿಮೆ, ಮತ್ತು ನವೀಕರಣ ಕಾರ್ಯದಲ್ಲಿ ಬೀಟ್ ಪೊಲೀಸರು ಸಹಕರಿಸಲಿದ್ದಾರೆ. ಕಡಿಮೆ ಮೊತ್ತದಲ್ಲಿ ವಿಮೆ ಮಾಡಿಸಲೂ ನೆರವಾಗುತ್ತಾರೆ. ಪೊಲೀಸರು ಎಂದರೆ ದಂಡ ಹಾಕುವವರು ಎಂಬ ತಪ್ಪು ಕಲ್ಪನೆಯಿಂದ ಹೊರಬಂದು, ಸುರಕ್ಷಿತ ವಾಹನ ಚಾಲನೆ ಮಾಡಿ. ಎನ್.ಚಂದನ್, ಡಿವೈಎಸ್‌ಪಿ