ವಿದುಷಿ ಗುರು ಡಾ.ವಸುಂಧರಾ ದೊರೆಸ್ವಾಮಿ ಅವರ ಶಿಷ್ಯೆ ಎಸ್.ಪಿ. ಸೌಂದರ್ಯ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾರೆ.
ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಏ.7 ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಂಗ ಪ್ರವೇಶಿಸಲಿದ್ದಾರೆ. ಇಲ್ಲಿ ನಾನಾ ನೃತ್ಯಬಂಧಗಳನ್ನು ಪ್ರಸ್ತುತಪಡಿಸುತ್ತಿರುವುದು ವಿಶೇಷ. ಇವರಿಗೆ ನಟುವಾಂಗ ಸಹಕಾರವನ್ನು ವಿದುಷಿ ಗುರು ಡಾ.ವಸುಂಧರಾ ದೊರೆಸ್ವಾಮಿ ನೀಡಲಿದ್ದಾರೆ. ದೀಪ್ತಿ ಶ್ರೀನಾಥ್ (ಹಿನ್ನೆಲೆ ಗಾಯನ), ವಿದ್ವಾನ್ ಎಂ.ಜನಾರ್ದನ ರಾವ್(ಮೃದಂಗ), ವಿದ್ವಾನ್ ನಿತೀಶ್ ಅಮ್ಮಣ್ಣಾಯ (ಕೊಳಲು), ವಿದ್ವಾನ್ ವಿನಯ್ ರಂಗದಾಳ್(ರಿದಂ ಪ್ಯಾಡ್) ಸಹಕಾರ ನೀಡಲಿದ್ದಾರೆ.
ಇಂಜಿನಿಯರಿಂಗ್ ಪದವೀಧರೆಯಾಗಿರುವ ಸೌಂದರ್ಯ ಸುನೀಲ್ ದತ್ತ ಪನಪಿಲ್ ಮತ್ತು ಎಸ್.ಪಿ.ಮಮತಾ ಅವರ ಪುತ್ರಿ. ನೃತ್ಯದ ಜತೆಗೆ ಚೆಸ್ ಆಟಗಾರ್ತಿಯೂ ಆಗಿರುವ ಇವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ವಿವಿಧ ಭರತನಾಟ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.