ಜಿಲ್ಲೆ

ಸಣ್ಣ ಲೋಪವೂ ಆಗದಂತೆ ಕರ್ತವ್ಯ ನಿರ್ವಹಿಸಿ...

ಉಡುಪಿಯ ಎಸ್ಪಿ ಹರಿರಾಂ ಶಂಕರ್​ ಸೂಚನೆ

ಜನ್ಮಾಷ್ಟಮಿ ಭದ್ರತಾ ಸಿಬ್ಬಂದಿಯೊಂದಿಗೆ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೆ.14 ಮತ್ತು 15ರಂದು ಎರಡು ದಿನ ಶ್ರೀಕೃಷ್ಣ ಜಯಂತಿ ಹಾಗೂ ವಿಟ್ಲಪಿಂಡಿ ನಿಮಿತ್ತ ವಿಶೇಷ ಧಾರ್ಮಿಕ, ಸಾಂಸತಿಕ ಲೀಲೋತ್ಸವ ಕಾರ್ಯಕ್ರಮ ನಡೆಯಲಿದೆ. ಭದ್ರತಾ ಕರ್ತವ್ಯಕ್ಕೆ ಪೊಲೀಸ್​ ಇಲಾಖೆಯಿಂದ ಯಾವುದೇ ತಪ್ಪುಗಳು ಆಗದಂತೆ ಮತ್ತು ಸಾರ್ವಜನಿಕರಿಗೂ, ಭಕ್ತರಿಗೂ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​ ಸೂಚನೆ ನೀಡಿದರು.

ಉಡುಪಿಯ ಮಥುರಾ ಕಂಫರ್ಟ್​ ಹೊಟೇಲ್​ನಲ್ಲಿ ಸೆಪ್ಟೆಂಬರ್​ 13ರಂದು ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಜನ್ಮಾಷ್ಟಮಿ ಕಾರ್ಯಕ್ರಮದ ಬಂದೋಬಸ್ತ್​ಗೆ ನಿಯೋಜಿಸಲ್ಪಟ್ಟ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಕಟ್ಟುನಿಟ್ಟಾಗಿ ನಿಯಮ ಪಾಲಿಸಿ

ರಾಜ್ಯ ಸರ್ಕಾರದ ಕ್ರೌಡ್​ ಮೇನೇಜ್ಮೆಂಟ್​ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಖ್ಯವಾಗಿ ಜನಜಂಗುಳಿ ನಿಯಂತ್ರಿಸಲು ಆದ್ಯತೆ ನೀಡಬೇಕು. ಸೆ.15ರ ಮಧ್ಯಾಹ್ನದ ಬಳಿಕ ಹೆಚ್ಚಿನ ಜನ ಸೇರುವ ಸಾಧ್ಯತೆಯಿದೆ. ನೂಕುನುಗ್ಗಲು ಅಥವಾ ಕಾಲ್ತುಳಿತ ಆಗುವುದನ್ನು ತಪ್ಪಿಸಲು ರಥಬೀದಿಯ ಎಡ-ಬಲಗಳಲ್ಲಿ ಹಾಕಿರುವ ಅಂಗಡಿಗಳನ್ನು ತೆರವು ಮಾಡಿಸಬೇಕು. ಒಂದೇ ಒಂದು ತಪ್ಪು ಆಗದಂತೆ ಕರ್ತವ್ಯ ನಿಭಾಯಿಸಬೇಕು. ನಿಯೋಜಿತ ಸಿಬ್ಬಂದಿ ಕರ್ತವ್ಯದ ಸ್ಥಳದಿಂದ ಹೊರಗೆ ಹೋಗುವಾಗ ಸೆಕ್ಟರ್​ ಅಧಿಕಾರಿಗಳಿಗೆ ಮಾಹಿತಿ ನೀಡಿಯೇ ತೆರಳಬೇಕು ಎಂದು ತಿಳಿಸಿದರು.

ಮೆಟಲ್​ ಡಿಟೆಕ್ಟರ್​ ಅಳವಡಿಕೆ

ಜನ ಜಂಗುಳಿಯಲ್ಲಿ ಚಿಕ್ಕ ಮಕ್ಕಳು ಪಾಲಕರ ಕೈತಪ್ಪಿ ಹೋಗುವ ಸಾಧ್ಯತೆಯಿದ್ದು ಆ ಮಕ್ಕಳ ಪಾಲಕರ ಪತ್ತೆಗೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ರಥಬೀದಿ ಸಂಪರ್ಕಿಸುವ ಎಲ್ಲ ಗೇಟ್​ಗಳಲ್ಲಿ ಮೆಟಲ್​ ಡಿಟೆಕ್ಟರ್​ ಅಳವಡಿಸಲಾಗುತ್ತಿದ್ದು, ಎಲ್ಲರನ್ನೂ ತಪಾಸಣೆಗೆ ಒಳಪಡಿಸಿಯೇ ಒಳಗೆ ಬಿಡಬೇಕು ಎಂದು ಎಸ್ಪಿ ಹರಿರಾಂ ಸೂಚಿಸಿದರು.

ಸಭೆಯಲ್ಲಿ ಡಿವೈಎಸ್ಪಿ ಪ್ರಭು ಡಿ.ಟಿ., ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸುಧಾಕರ ನಾಯ್ಕ, ಪೊಲೀಸ್​ ಅಧಿಕಾರಿಗಳಾದ ಮಹೇಶಪ್ರಸಾದ್​, ಮಂಜುನಾಥ ಬಡಿಗೇರ, ಭರತೇಶ್​ ಉಪಸ್ಥಿತರಿದ್ದರು.

ಭದ್ರತೆಗೆ 333 ಅಧಿಕಾರಿ, ಸಿಬ್ಬಂದಿ ನಿಯೋಜನೆ

ಜನ್ಮಾಷ್ಟಮಿ ಕಾರ್ಯಕ್ರಮದ ಭದ್ರತೆಗೆ ಒಟ್ಟು 333 ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಲಾಗಿದೆ. ಡಿವೈಎಸ್ಪಿ-1, ಪಿಐ, ಸಿಪಿ-5, ಎಎಸ್​ಐ-34, ಹೆಚ್​ಸಿ, ಪಿಸಿ-191, ಮಹಿಳಾ ಸಿಬ್ಬಂದಿ-43, ಹೋಮ್ ಗಾರ್ಡ್ಸ್​-47 ಮಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಡಿಎಆರ್​ ತುಕಡಿ-16, ಅಗ್ನಿ ಶಾಮಕ ದಳ-1, ಚಿತ್ರೀಕರಣಕ್ಕೆ 7 ಸಿಬ್ಬಂದಿ, ಶ್ವಾನದಳ-2, ಎಎಸ್​ಸಿ ತಂಡ-3, ಡ್ರೋಣ್​ ಕ್ಯಾಮರಾ-2, ಕ್ಯುಆರ್​ಟಿ ತಂಡ-1, ಸ್ಕೈ ಸೆಂಟ್ರಿ-5, ಉಕ, ಚಿಕ್ಕಮಗಳೂರು ಹಾಗೂ ದಕ ಜಿಲ್ಲೆಯಿಂದ ತಲಾ 2 ಹೆಚ್ಚುವರಿ ಕ್ರೈಂ ಸ್ಟಾಫ್, ಗಸ್ತು ಸಿಬ್ಬಂದಿ-17 ನೇಮಿಸಲಾಗಿದೆ.
ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚಿನ ಜನ ಸೇರುವ ಸಾಧ್ಯತೆ ಇದ್ದು ಮಹಿಳಾ ಸಿಬ್ಬಂದಿ ಹೆಚ್ಚು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕು. ಜನರ ಬ್ಯಾಗ್​, ಚಿನ್ನಾಭರಣ ಮೊದಲಾದ ವಸ್ತುಗಳು ಕಳವಾಗುವ ಸಾಧ್ಯತೆಯಿದ್ದು ಅವುಗಳ ಮೇಲೂ ನಿಗಾ ಇಡಬೇಕು. ಎರಡು ದಿನದ ಈ ಜನ್ಮಾಷ್ಟಮಿ ಹಬ್ಬದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಸಮನ್ವಯದೊಂದಿಗೆ ಸಣ್ಣ ಲೋಪವೂ ಆಗದಂತೆ ಕರ್ತವ್ಯ ನಿರ್ವಹಿಸಬೇಕು. | ಹರಿರಾಂ ಶಂಕರ್​. ಜಿಲ್ಲಾ ಪೊಲೀಸ್​ ವರಿಷ್ಠ