ಉಡುಪಿ ಎಸ್ಪಿ ಹರಿರಾಂ ಶಂಕರ್ ಅಭಿಮತ
ಜಿಲ್ಲಾ ಮಟ್ಟದ ಮಹಿಳಾ ಪೊಲೀಸ್ ಸಮಾವೇಶ
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿವುದು ಊಹಿಸಿದಷ್ಟು ಸುಲಭವಲ್ಲ. ಈ ಸೇವೆಯಲ್ಲಿ ನಿರತ ಮಹಿಳೆಯರಿಗಂತೂ ವೈಯಕ್ತಿಕವಾಗಿ, ದೈಹಿಕವಾಗಿ ಕೆಲವು ಸಮಸ್ಯೆಯೊಂದಿಗೇ ಕೆಲಸ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಮಹಿಳಾ ಸಿಬ್ಬಂದಿಗೆ ಕರ್ತವ್ಯದೊಂದಿಗೆ ಮಾನಸಿಕ ಆರೋಗ್ಯವೂ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಜಗನ್ನಾಥ ಭವನದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಹಿಳಾ ಸಿಬ್ಬಂದಿಗಾಗಿ ಗುರುವಾರ (ಅ.16) ಆಯೋಜಿಸಿದ್ದ ಎರಡು ದಿನಗಳ ಮಹಿಳಾ ಪೊಲೀಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಿಬ್ಬಂದಿಗೆ ವಿವಿಧ ತರಬೇತಿ
ಎರಡು ದಿನಗಳ ಈ ಕಾರ್ಯಾಗಾರದಲ್ಲಿ ತಮಗೆ ವಿವಿಧ ತರಬೇತಿಯೊಂದಿಗೆ ಇಲಾಖೆಯಲ್ಲಾಗಿರುವ ಇತ್ತೀಚೆಗಿನ ಬದಲಾವಣೆ, ತಾಂತ್ರಿಕ ವಿಚಾರವೂ ಸೇರಿದಂತೆ ಕರ್ತವ್ಯಕ್ಕೆ ಪೂರಕವಾಗಬಲ್ಲ ಅನೇಕ ಮಾಹಿತಿ ನೀಡಲಾಗುವುದು. ಇದಲ್ಲದೆ, ಒತ್ತಡದಿಂದ ತುಸು ಹೊರಬರುವಂತಾಗಲು ಉಡುಪಿಯ ಕಂಡೀರಾ ಬ್ಲಾಗ್ನ ಮಂಜುನಾಥ ಕಾಮತ್ ಅವರು ತಮಗೆ ಉಡುಪಿಯ ಸಂಸ್ಕೃತಿ, ಸಂಪ್ರದಾಯ ಕುರಿತು ಸಮಗ್ರ ಚಿತ್ರಣ ನೀಡಲಿದ್ದಾರೆ. ಇವೆಲ್ಲವುಗಳ ಮೂಲಕ ಜೀವನದಲ್ಲಿ ಹಾಗೂ ಕರ್ತವ್ಯದಲ್ಲಿ ಬದಲಾವಣೆ ಕಂಡುಕೊಳ್ಳಿರಿ ಎಂದು ಸಲಹೆ ನೀಡಿದರು.
ಕಾರ್ಯಾಗಾರದ ಮೊದಲ ದಿನ ಮಣಿಪಾಲ ಕೆಎಂಸಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸುಜಾತಾ ಬಿ.ಎಸ್. ಅವರು ಮಹಿಳಾ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷಪ್ರಿಯಂವದಾ (ಐಪಿಎಸ್) ಆನ್ಲೈನ್ ಸೈಬರ್ ಅಪರಾಧಗಳ ಬಗ್ಗೆ ಹಾಗೂ ಪೋರ್ಟಲ್ ಬಗ್ಗೆ ತರಬೇತಿ ನೀಡಿದರು. ಎಸ್ಡಿಎಂ ಪರೀಕದ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಯೋಗ ಮತ್ತು ಧ್ಯಾನದ ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಕುಂದಾಪುರ ಡಿಎಸ್ಪಿ ಎಚ್.ಡಿ. ಕುಲಕರ್ಣಿ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ 110ಕ್ಕೂ ಅಧಿಕ ಮಹಿಳಾ ಸಿಬ್ಬಂದಿ ಕಲ್ಪನಾ ಥಿಯೇಟರ್ನಲ್ಲಿ ಸಂಜೆ ಕಾಂತಾರಾ ಸಿನಿಮಾ ವೀಕ್ಷಿಸಿ, ಸಂತಸ ಪಟ್ಟರು.