ಜಿಲ್ಲೆ

ಚರ್ಚೆಗೆ ಗ್ರಾಸವಾದ ಎಸ್‌ಪಿ ದಸರಾ ವಿಮರ್ಶೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಒಬ್ಬ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ವೇಳೆ ಕೊಡಗು ಎಸ್.ಪಿ. ಕೆ. ರಾಮರಾಜನ್ ಮಡಿಕೇರಿ ದಸರಾವನ್ನು ವಿಶ್ಲೇಷಿಸಿ ಹಂಚಿಕೊಂಡಿರುವ ಅಭಿಪ್ರಾಯಗಳು ಈಗ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಂಪ್ರದಾಯಿಕ ಆಚರಣೆಯೊಂದು ಆಧುನಿಕತೆಯ ಭರಾಟೆಯಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಬಗ್ಗೆ ಅವರು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ. ಮಡಿಕೇರಿಯ ಕಿಷ್ಕೆಂಧೆಯಂತಹ ರಸ್ತೆಗಳಲ್ಲಿ ಮುಂದೊಂದು ದಿನ ಕಾಲ್ತುಳಿತ ಮಾದರಿಯ ಅನಾಹುತ ಸಂಭವಿಸುವ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಅನುದಾನ ಮತ್ತು ಸಾರ್ವಜನಿಕರ ದೇಣಿಗೆಯಿಂದ ನಡೆಯುವ ಮಡಿಕೇರಿ ದಸರಾ ನಿರೀಕ್ಷಿತ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎನ್ನುವುದು ಸಾಮಾನ್ಯ ಆರೋಪ. ಮಂಟಪವೊಂದಕ್ಕೆ ೧೦-೩೦ ಲಕ್ಷ ರೂ. ತನಕ ಖರ್ಚು ಮಾಡಿ ಅದರ ಪ್ರದರ್ಶನ ಕೇವಲ ತೀರ್ಪುಗಾರರಿಗೆ ಮಾತ್ರ ಎನ್ನುವಂತಾದರೆ ದಸರಾ ಜನೋತ್ಸವಕ್ಕೆ ಯಾವ ಅರ್ಥ ಇದೆ ಎನ್ನುವು ಪ್ರಶ್ನೆಯೂ ಪ್ರತಿವರ್ಷ ಕಾಡುತ್ತಿರುತ್ತದೆ. ಮಡಿಕೇರಿ ದಸರಾಕ್ಕೆ ಅದರದ್ದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು, ದೈವಿಕ ಆಚರಣೆಯೊಂದಿಗೆ ಥಳಕು ಹಾಕಿಕೊಂಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದ್ಧೂರಿತನದ ನೆಪದಲ್ಲಿ ಡಿಜೆ, ಪಟಾಕಿ, ಲೇಸರ್ ಬೆಳಕಿನ ಥಳಕು ಬೆಳಕಿನಲ್ಲಿ ಸಂಪ್ರದಾಯ ಮರೆಯಾಗುತ್ತಿರುವುದನ್ನೂ ಪ್ರಜ್ಞಾವಂತರು ಗಮನಿಸುತ್ತಾ ಬಂದಿದ್ದಾರೆ.

೨ ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಮಡಿಕೇರಿ ದಸರಾ ಉತ್ಸವ ಶಕ್ತಿ ದೇವತೆಗಳ ಕರಗಗಳನ್ನು ಆರಾಧಿಸುವ ಮೂಲಕ ಆರಂಭಗೊಳ್ಳುವುದು ವಿಶೇ?. ಅರಸರ ಕಾಲದಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗಗಳು, ಸಾವು-ನೋವುಗಳಿಗೆ ಪರಿಹಾರಕ್ಕಾಗಿ ಅಂದಿನ ಅರಸರು ನಾಡಿನ ೪ ಶಕ್ತಿ ದೇವತೆಗಳ ಮೊರೆ ಹೋಗಿ, ನಾಡಿನ ಜನರನ್ನು ಕಾಪಾಡುವಂತೆ ಬೇಡಿಕೊಂಡಿದ್ದರು. ಕರಗಗಳನ್ನು ಮಡಿಕೇರಿಯಲ್ಲಿ ಪ್ರದಕ್ಷಿಣೆ ಹಾಕಿಸಲಾಗಿತ್ತು. ನಂತರ ಸಾಂಕ್ರಾಮಿಕ ರೋಗಗಳು ಮರೆಯಾಯಿತು ಎಂಬುದು ಮಡಿಕೇರಿ ದಸರಾ ಜತೆಗೆ ಬೆರೆತುಕೊಂಡಿರುವ ಕತೆ. ಆದರೆ ಈಗ ದಸರಾ ಆಚರಣೆ ಯಾವ ರೀತಿಯಲ್ಲಿ ಇದೆ ಎನ್ನುವುದು ಜಗಜ್ಜಾಹೀರಾಗಿದೆ.

ಮಡಿಕೇರಿ ದಸರಾ ಆಚರಣೆ ಶಿಸ್ತುಬದ್ಧವಾಗಿ ಆಚರಿಸಬೇಕು ಎನ್ನುವ ಕೂಗು ದಸಾರಕ್ಕಿಂತ ಒಂದು ತಿಂಗಳು ಮೊದಲು ಆರಂಭವಾಗಿ ದಶಮಂಟಪಗಳ ಶೋಭಾಯಾತ್ರೆ ದಿನ ಡಿಜೆ ಅಬ್ಬರದಲ್ಲಿ ಸದ್ದಿಲ್ಲದೆ ಕರಗಿ ಹೋಗಿಬಿಡುತ್ತದೆ. ಈ ವಿಷಯ ಮತ್ತೆ ಮುನ್ನಲೆಗೆ ಬರುವುದು ಮುಂದಿನ ದಸರಾ ವೇಳೆಗೆ. ಆದರೆ ಈ ಬಾರಿ ಜಿಲ್ಲೆಯ ಪೊಲೀಸ್ ಇಲಾಖೆ ಮುಖ್ಯಸ್ಥ ಸ್ಥಾನದಲ್ಲಿ ಇದ್ದುಕೊಂಡು ಕೊಡಗು ಎಸ್.ಪಿ. ಕೆ. ರಾಮರಾಜನ್ ದಸರಾವನ್ನು ಹತ್ತಿರದಿಂದ ಗಮನಿಸಿ ಹಂಚಿಕೊಂಡಿರುವ ಅಭಿಪ್ರಾಯಗಳು ಕೊಡಗಿನಲ್ಲಿ ಚರ್ಚೆಗೆ ಕಾರಣವಾಗಿದೆ.

ನಾನೂ ಹತ್ತು ಮಂಟಪಗಳನ್ನು ನೋಡಬೇಕೆಂದು ಕುತೂಹಲದಿಂದ ಇದ್ದೆ. ಆದರೆ ನನಗೆ ಎರಡು ಮಂಟಪಗಳನ್ನು ಮಾತ್ರ ನೋಡಲು ಸಾಧ್ಯವಾಯಿತು, ಎನ್ನುವ ರಾಮರಾಜನ್, ದಶಮಂಟಪಗಳ ಶೋಭಾಯಾತ್ರೆಯಂದು ಸಾಮರ್ಥ್ಯ ಇರುವವರು ಮಾತ್ರ ದಸರಾ ನೋಡುವ ಪರಿಸ್ಥಿತಿ ಇದೆ. ಮಕ್ಕಳು, ವೃದ್ಧರು, ಮಹಿಳೆಯರು ಕುಟುಂಬ ಸಮೇತರಾಗಿ ಬಂದು ದಸರಾದಲ್ಲಿ ಭಾಗಿಯಾಗಬೇಕು. ಆದರೆ ಇದು ಆಗುತ್ತಿಲ್ಲ ಎಂಬುದು ವಿ?ಾದಕರ. ಯುವಕರು ಮತ್ತು ಗುಂಪಿನಲ್ಲಿ ರಭಸದಿಂದ ನುಗ್ಗಿಕೊಂಡು ಹೋಗುವವರು ಮಾತ್ರ ದಸರಾ ನೋಡುವಂತಾಗಿದೆ, ಎನ್ನುವ ಮೂಲಕ ಮಡಿಕೇರಿ ದಸರಾದ ಒಟ್ಟಾರೆ ಚಿತ್ರಣ ತೆರೆದಿಡುತ್ತಾರೆ.

ಶೋಭಾಯತ್ರೆ ದಿನ ನಗರ ಪೊಲೀಸ್ ಠಾಣೆಯ ಬಳಿ ಯುವಕ, ಮಹಿಳೆ ಮತ್ತು ಮಗುವೊಂದು ಕೆಳಗೆ ಬಿದ್ದು ಮೇಲೇಳಲಾಗದೆ ಕ?್ಟ ಪಡುತ್ತಿದ್ದರು. ಈ ಸಂದರ್ಭ ಲಘು ಲಾಠಿ ಚಾರ್ಜ್ ಮಾಡಿ ಅವರನ್ನು ರಕ್ಷಣೆ ಮಾಡಲಾಯಿತು. ಮಂಟಪವೊಂದರ ವಾಹನದ ತೂಕ ಬ್ಯಾಲೆನ್ಸ್ ಆಗದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮಗುಚಿದ ಘಟನೆಯೂ ನಡೆಯಿತು. ಅಲ್ಲಿ ಜನರು ಇದ್ದಿದ್ದರೆ ಭಾರಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ದೇವರ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲ ಮಂಟಪ ಸಮಿತಿಯವರು ಜಾಗೃತರಾಗಬೇಕು. ಅವೈಜ್ಞಾನಿಕ ಮಂಟಪಗಳ ನಿರ್ಮಾಣ ಒಂದಲ್ಲ ಒಂದು ದಿನ ಸಮಸ್ಯೆಯಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಕೊಡುತ್ತಾರೆ.

ಮಡಿಕೇರಿ ದಸರಾದಲ್ಲಿ ಅವಶ್ಯಕತೆ ಮೀರಿ ಹೆಚ್ಚು ಧ್ವನಿವರ್ಧಕ ಬಳಕೆ ಮಾಡಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಿಂದ ಕೆಲವು ರೋಗಿಗಳನ್ನು ದಸರಾ ಹಿನ್ನೆಲೆಯಲ್ಲಿ ಬೇರೆ ಕಡೆ ಸ್ಥಳಾಂತರವನ್ನೂ ಮಾಡಲಾಗಿದೆ. ನಗರದ ಕೆಲ ಹಿರಿಯ ನಾಗರಿಕರು ಮನೆಗೆ ಬೀಗ ಹಾಕಿ ಠಾಣೆಗೆ ಮಾಹಿತಿ ನೀಡಿ ಸಂಬಂಧಿಕರ ಮನೆಗೂ ತೆರಳಿದ್ದೂ ಇದೆ. ಮಡಿಕೇರಿ ರಸ್ತೆ ತೀರಾ ಕಿರಿದಾಗಿದೆ. ಆದರೆ ಕೆಲವು ಮಂಟಪಗಳು ರಸ್ತೆಗಿಂತ ದೊಡ್ಡದಾಗಿತ್ತು. ಹೀಗೆ ಮಾಡಿದರೆ ಜನ ಓಡಾಡುವುದು ಹೇಗೆ? ಎನ್ನುವ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.

ಕೋಟ್ಯಂತರ ರೂ. ಖರ್ಚು ಮಾಡಿ ಮಾಡುವ ದಸರಾವನ್ನು ಸಣ್ಣ ಸಣ್ಣ ರಸ್ತೆಯಲ್ಲಿ ಸಾಮಾನ್ಯ ಜನರು ವೀಕ್ಷಣೆ ಮಾಡಲು ಆಗುತ್ತಿಲ್ಲ. ಮದ್ಯ ಸೇವಿಸಿ ದಸರಾಗೆ ಬಂದು ತೊಂದರೆ ಕೊಡುವುದು, ಮಹಿಳೆಯರ ಮತ್ತು ಯುವತಿಯರ ಜತೆ ಅಸಭ್ಯವಾಗಿ ವರ್ತಿಸುವ ಆರೋಪಗಳೂ ಕೇಳಿಬರುತ್ತಿರುತ್ತದೆ. ಇದರಿಂದ ಹಲವು ಜನರು ಕುಟುಂಬ ಸಮೇತರಾಗಿ ದಸರಾಗೆ ಆಗಮಿಸಲು ಹಿಂದೇಟು ಹಾಕುವುದು ಕಂಡುಬಂದಿದೆ ಎನ್ನುವುದನ್ನೂ ಗಮನಿಸಲಾಗಿದೆ.

ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ಮಡಿಕೇರಿ ದಸರಾವನ್ನು ಎಲ್ಲರೂ ಕುಳಿತು ವ್ಯವಸ್ಥಿತವಾಗಿ ನೋಡಲು ದೊಡ್ಡ ಮೈದಾನವನ್ನು ಗುರುತಿಸಬೇಕು. ಯುವಕರು ಮಾತ್ರವಲ್ಲದೆ ಎಲ್ಲಾ ವಯೋಮಾನದವರು ಅಲ್ಲಿಗೆ ವೀಕ್ಷಿಸುವಂತಿರಬೇಕು. ಮಡಿಕೇರಿ ದಸರಾದಲ್ಲಿ ಮಹಿಳೆಯರಿಗೆ ಮಕ್ಕಳಿಗೆ ವೃದ್ಧರಿಗೆ ರಕ್ಷಣೆ ಇದೆ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡುವಂತಾಗಬೇಕು. ದಸರಾ ಸಂದರ್ಭದಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಮಾಡಬೇಕು. ಯಾವುದೇ ಭೀತಿ ಇಲ್ಲದೆ ದಸರಾವನ್ನು ಜನರು ವೀಕ್ಷಣೆ ಮಾಡುವಂತಿರಬೇಕು.

  • ಕೆ. ರಾಮರಾಜನ್, ಕೊಡಗು ಎಸ್.ಪಿ

ಪೊಲೀಸ್ ಅಧಿಕಾರಿಯಾಗಿ ಕೆ. ರಾಮರಾಜನ್ ಅವರ ವಿಮರ್ಶೆ ಸರಿ ಇದೆ.
ಆದರೆ ಬದಲಾವಣೆ ಅ?್ಟು ಸುಲಭವೇ? ಬದಲಾವಣೆ ಎಂಬ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಇಂದು ಯುವ ಪೀಳಿಗೆ ಮಾತ್ರ ಅಲ್ಲ, ಬಹುತೇಕರು ಪಾಶ್ಚಾತ್ಯ ಸಂಗೀತಕ್ಕೆ ಮನ ಸೋತಿದ್ದಾರೆ. ಭಾರತೀಯ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಮತ್ತು ಪಾಶ್ಚಾತ್ಯ ಸಂಗೀತ ಕಾರ್ಯಕ್ರಮಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಅಜಗಜಾಂತರ ಕಾಣಬಹುದಾಗಿದೆ. ಯಾವ ಮಂಟಪ ಅಧಿಕಾರಿಗಳು ಹಾಕಿ ಕೊಟ್ಟ ನಿಯಮ ಪಾಲಿಸುತ್ತದೆ ಅದಕ್ಕೆ ಮಾತ್ರ ಸರ್ಕಾರದ ಅನುದಾನ ಸಿಗುತ್ತದೆ ಎನ್ನುವ ನಿಯಮ ಮಾಡಬೇಕು. ದಸರಾ ಸಮಿತಿ ಮತ್ತು ಅಧಿಕಾರಿಗಳು ಈ ಬಗ್ಗೆ ಜಂಟಿಯಾಗಿ ನಿಯಮ ರೂಪಿಸಬೇಕು. ಈ ಜಂಟಿ ಸಮಿತಿಯೇ ಮಂಟಪಗಳು ನಿಯಮ ಪಾಲಿಸುತ್ತದೆ ಎಂಬುದನ್ನು ಪರಿಶೀಲಿಸಬೇಕು. ಒಂದೆರಡು ವ?ರ್ಗಳಲ್ಲಿ ಮಂಟಪ ಶೋಭಾ ಯಾತ್ರೆ ಬದಲಾವಣೆ ಆಗಲು ಇದರಿಂದ ಸಾಧ್ಯ.

  • ಹೆಚ್.ಟಿ. ಅನಿಲ್, ಅಧ್ಯಕ್ಷ, ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಸಮಿತಿ

ಎಸ್.ಪಿ. ಕೆ. ರಾಮರಾಜನ್ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸರಿಯಾಗಿಯೇ ಇದೆ. ಪೊಲೀಸ್ ಇಲಾಖೆಯ ಒಬ್ಬ ಉನ್ನತ ಅಧಿಕಾರಿಯಾಗಿ ಅವರು ಕೇವಲ ೨ ಮಂಟಪಗಳ ಪ್ರದರ್ಶನ ನೋಡಲು ಸಾಧ್ಯವಾಯಿತು ಎನ್ನುವುದಾದರೆ ಉಳಿದವರ ಪಾಡು ಏನಾಗಿರಬಹುದು ? ಸಾರ್ವಜನಿಕರು ಮತ್ತು ಸರ್ಕಾರದ ಸಹಕಾರದಲ್ಲಿ ನಿರ್ಮಾಣ ಆಗುವ ದಶ ಮಂಟಪಗಳ ಪ್ರದರ್ಶನ ವೀಕ್ಷಣೆ ಎಲ್ಲರಿಗೂ ಸಿಗುವಂತಾಗಬೇಕು. ಇದನ್ನು ನಾನು ಕೂಡ ಮೊದಲಿನಿಂದ ಪ್ರತಿಪಾದಿಸುತ್ತಾ ಬಂದಿದ್ದೇನೆ. ಈ ಬಾರಿ ಹೆಚ್ಚು ಪ್ರದರ್ಶನ ನೀಡುವ ಮಂಟಪಗಳಿಗೆ ವಿಶೇಷ ಬಹುಮಾನವನ್ನೂ ಘೋಷಿಸಲಾಗಿತ್ತು. ಆದರೂ ಪ್ರಯೋಜನ ಆಗಿಲ್ಲ. ಮಡಿಕೇರಿ ದಸರಾ ಉತ್ಸವದಲ್ಲಿ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ಚರ್ಚೆ ಆಗಬೇಕು.

  • ಅನಿತಾ ಪೂವಯ್ಯ, ಅಧ್ಯಕ್ಷೆ, ಮಡಿಕೇರಿ ನಗರಸಭೆ

ಎಸ್.ಪಿ. ಕೆ. ರಾಮರಾಜನ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ. ಅವರ ಸಲಹೆಗಳು ಉತ್ತಮವಾಗಿಯೇ ಇದೆ. ಈ ಬಗ್ಗೆ ದಸರಾ ಸಮಿತಿ ಮತ್ತು ದಶಮಂಟಪ ಸಮಿತಿಗಳಲ್ಲಿ ಚರ್ಚೆ ನಡೆಸಲಾಗುವುದು. ಅವರ ಸಲಹೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು.
ಪ್ರಕಾಶ್ ಆಚಾರ್ಯ, ಕಾರ್ಯಾಧ್ಯಕ್ಷ, ಮಡಿಕೇರಿ ನಗರ ದಸರಾ ಸಮಿತಿ