ಜಿಲ್ಲೆ

ಅಪಘಾತ ಕಪ್ಪುಚುಕ್ಕೆ ಸ್ಥಳ ಗುರುತಿಸಲು ಜಂಟಿ ಸಮೀಕ್ಷೆಗೆಜಿಲ್ಲಾಧಿಕಾರಿ ಸೂಚನೆ

Chitradurga
ಚಿತ್ರದುರ್ಗ: ಜಿಲ್ಲೆಯಲ್ಲಿ ಅಪಘಾತ ತಗ್ಗಿಸಲು ಪರಿಣಾಮಕಾರಿಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಇಲ್ಲದಿದ್ದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪದೇ ಪದೇ ಜರುಗುವ ಅಪಘಾತ ವಲಯಗಳಲ್ಲಿ ನಿಯಂತ್ರಣಕ್ಕಾಗಿ ಪ್ರತಿಫಲಕ, ಮಿನುಗುವ ದೀಪ ಅಳವಡಿಸುವುದು, ರಸ್ತೆ ಬದಿಯ ಮರಗಳಿಗೆ ಕೆಂಪು, ಬಿಳಿ ಬಣ್ಣ ಬಳಸುವುದು ಸೇರಿ ಸೂಚನಾ ಫಲಕ ಅಳವಡಿಸಿ ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾತನಾಡಿ, ಚಿತ್ರದುರ್ಗದ ಜೆಎಂಐಟಿ ವೃತ್ತ, ಬಸವೇಶ್ವರ ಆಸ್ಪತ್ರೆ, ನಾಮಕಲ್ ಗ್ಯಾರೇಜ್, ಹಂಪನೂರು, ಕೊಳಹಾಳ್, ಈರಜ್ಜನಹಟ್ಟಿ, ಕೊಳಹಾಳ, ಚಿಕ್ಕಬೆನ್ನೂರು, ಹಿರಿಯೂರು ನಗರದ ವೇದಾವತಿ ಬ್ರಿಡ್ಜ್, ದುಮ್ಮಿ, ಹೊಳಲ್ಕೆರೆ-ಹೊಸದುರ್ಗ ಮಾರ್ಗ ಸೇರಿ ಹೆಚ್ಚು ಅಪಘಾತ ಸಂಭವಿಸುವ 15 ಸ್ಥಳಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಬಹುಮುಖ್ಯವಾಗಿ ಈ ಸ್ಥಳಗಳಲ್ಲಿ ಅಪಘಾತ ನಿಯಂತ್ರಿಸುವ ಅಗತ್ಯ ಹೆಚ್ಚಿದೆ. ಜತೆಗೆ 46 ಅವೈಜ್ಞಾನಿಕ ರಸ್ತೆ ಉಬ್ಬು ತೆರವುಗೊಳಿಸಬೇಕಿದೆ ಎಂದು ಸಲಹೆ ನೀಡಿದರು.

ಬೆಂಗಳೂರು ಮತ್ತು ದಾವಣಗೆರೆಯಿಂದ ಚಿತ್ರದುರ್ಗ ನಗರದೊಳಗೆ ಪ್ರವೇಶಿಸುವ ಮುನ್ನ ಸೂಚನಾ ಫಲಕ ಅಳವಡಿಸಿಲ್ಲ. ಇದರಿಂದಾಗಿಯೂ ಕೆಲವೊಮ್ಮೆ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಕಡ್ಡಾಯವಾಗಿ ಫಲಕ ಅಳವಡಿಸಿ ಎಂದು ಸಭೆಯ ಗಮನ ಸೆಳೆದರು.

ಹೆಲ್ಮೆಟ್ ಕಡ್ಡಾಯ: ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಹೆಲ್ಮೆಟ್ ಅನುಷ್ಠಾನವಾಗುತ್ತಿಲ್ಲ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಮಾತ್ರ ಅಪಘಾತ ತಡೆಯಲು ಸಾಧ್ಯ ಎಂದ ಡಿಸಿ, ಚಿತ್ರದುರ್ಗದ ಗಾಂಧಿ ಹಾಗೂ ಎಸ್‍ಬಿಐ ಬ್ಯಾಂಕ್ ವೃತ್ತದ ಬಳಿ ಟ್ರಾಫಿಕ್ ಸಿಗ್ನಲ್ ಅನ್ನು ಈ ಹಿಂದೆಯೇ ಅಳವಡಿಸಲಾಗಿದೆ. ಆದರೆ ನಿಷ್ಕ್ರಿಯವಾಗಿವೆ. ಪುನಃ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಿ ಎಂದು ನಗರಸಭೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ್, ನಗರ ವ್ಯಾಪ್ತಿಯಲ್ಲಿ ಸರ್ಕಾರದ ಮಾನದಂಡ ಅನುಸರಿಸಿಯೇ ರಸ್ತೆ ಹಾಗೂ ಡಿವೈಡರ್ ನಿರ್ಮಿಸಲಾಗಿದೆ. ಈ ಕುರಿತು ಲಿಖಿತವಾಗಿ ದೃಢೀಕರಣ ನೀಡಲಾಗುವುದು. ಚಿತ್ರದುರ್ಗದ ಗಾಂಧಿ ವೃತ್ತದಿಂದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಏಕಮುಖ ರಸ್ತೆಗೆ ತಡೆಗೋಡೆ ನಿರ್ಮಿಸಲಾಗಿದೆ. ಈ ಮಾರ್ಗದ ರಸ್ತೆ ವಿಸ್ತರಣೆ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ತೀರ್ಪು ಪ್ರಕಟವಾದ ನಂತರ ತಡೆಗೋಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ಸತ್ಯ ಇತರರಿದ್ದರು.

ಮುಖ್ಯಾಂಶಗಳು

ಅಗತ್ಯ ಇರುವೆಡೆ ಮಾತ್ರ ಆಟೋ ನಿಲ್ದಾಣ ನಿರ್ಮಿಸಿ

ಪ್ರಮುಖ ಮಾರ್ಗಗಳ ನೆಲಮಹಡಿಯಲ್ಲೇ ಪಾರ್ಕಿಂಗ್‌ ಸೂಕ್ತ

ಫೆನ್ಸಿಂಗ್ ತೆಗೆಯುವವರ ವಿರುದ್ಧ ಪ್ರಕರಣ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ರಸ್ತೆಯ ಇಕ್ಕೆಲಗಳಲ್ಲಿ ಕೆಲವೆಡೆ ಗೋಡೆ ಅಥವಾ ಫೆನ್ಸಿಂಗ್ ನಿರ್ಮಿಸಲಾಗಿದೆ. ಆದರೆ, ಕೆಲ ಡಾಬಾ, ಹೋಟೆಲ್ ಮಾಲೀಕರು ತೆರವುಗೊಳಿಸಿ, ನೇರ ಪ್ರವೇಶಕ್ಕೆ ಅವಕಾಶ ಮಾಡಿಕೊಂಡಿದ್ದಾರೆ. ಇದರಿಂದ ಅಪಘಾತ ಸಂಭವ ಹೆಚ್ಚಾಗಿದೆ. ಈ ರೀತಿ ಮಾಡುವವರ ಡಾಬಾ, ಹೋಟೆಲ್ ಮುಚ್ಚಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗಿ. ಇಲ್ಲದಿದ್ದರೆ, ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಪರಶುರಾಂ ಹೇಳಿದರು.

ಕೋಟ್
ಜಿಲ್ಲೆಯಿಂದ ಹಾದುಹೋಗುವ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹೆದ್ದಾರಿಗಳಲ್ಲಿ ಈಗಾಗಲೇ ಗುರುತಿಸಲಾಗಿರುವ ಅಪಘಾತ ಕಪ್ಪುಚುಕ್ಕೆ ಸ್ಥಳಗಳ ಕುರಿತು ಜಂಟಿ ಸಮೀಕ್ಷಾ ಕಾರ್ಯ ಕೈಗೊಳ್ಳಿ. ಮುಂದಿನ ಸಭೆಯೊಳಗೆ ಅಪಘಾತ ತಪ್ಪಿಸಲು ಕೈಗೊಂಡ ಕ್ರಮಗಳ ವರದಿ ಸಲ್ಲಿಸಿ. ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿಕೋಟ್ ರಾಷ್ಟ್ರೀಯ, ರಾಜ್ಯ ರಾಷ್ಟ್ರೀಯ ಹೆದ್ದಾರಿ ಬದಿಯ ಡಾಬಾಗಳಲ್ಲಿ ಊಟದ ಜೊತೆಗೆ ಅನಧಿಕೃತವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕುರಿತು ಅಬಕಾರಿ ಅಧಿಕಾರಿಗಳು ಕ್ರಮ ಜರುಗಿಸಿ. ಕೆ.ಪರಶುರಾಮ್‌, ಎಸ್‌ಪಿ