ಸಿರಗುಪ್ಪ: ತಾಲೂಕಿನ ಹಳೇಕೋಟೆ ಗ್ರಾಮದ ಹತ್ತಿರದ ಕಲ್ಯಾಣಿ ಜಲ್ಲಿ ಕ್ರಷರ್‌ಗೆ (ಕಲ್ಲಿನ ಕ್ವಾರಿ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಬಂಡಾರು ಸೋಮವಾರ ಭೇಟಿ ನೀಡಿದರು.
ನಂತರ ಎಸ್ಪಿ ಅರುಣ್ ಕುಮಾರ್ ಬಂಡಾರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮಾಹಿತಿ ಪಡೆಲಾಗಿದೆ. ಸದ್ಯ ತಾತ್ಕಾಲಿಕವಾಗಿ ಕಲ್ಯಾಣಿ ಜಲ್ಲಿ ಕ್ರಷರ್‌ನ್ನು ಬಂದ್ ಮಾಡಲು ಸೂಚಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತನಿಖಾ ವರದಿಯನ್ನಾಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬ್ಲಾಸ್ಟಿಂಗ್‌ನಿಂದ ಮನೆಗಳು ಬಿರುಕು ಬಿಡುತ್ತಿವೆ. ಅಲ್ಲದೆ ಸ್ಪೋಟದ ರಾಸಾಯನಿಕ ವಾಸನೆಯಿಂದ ಸಾರ್ವಜನಿಕರಿಗೆ ದುಷ್ಪರಿಣಾಮವಾಗಲಿದೆ. ಮನೆ ಬಿರುಕು ಬಿಟ್ಟಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ಮಾಡಲಿದ್ದಾರೆ. ಅಲ್ಲದೆ ಗಣಿಗಾರಿಕೆಯಿಂದ ಆಗಿರುವ ಅನಾಹುತದ ತನಿಖೆ ನಡೆಯಲಿದೆ. ಬ್ಲಾಸ್ಟಿಂಗ್ ಸಮಯದಲ್ಲಿ ಮಾನದಂಡ ಅನುಸರಿಸಲಾಗಿದೆಯೇ ಎಂಬುದು ತನಿಖೆಯಿಂದ ತಿಳಿಯಲಿದೆ ಎಂದರು.
ಗ್ರಾಮಸ್ಥ ತಿಮ್ಮಪ್ಪ ಮಾತನಾಡಿ, ಅನೇಕ ವರ್ಷಗಳಿಂದ ಗ್ರಾಮದ ಸುತ್ತಮುತ್ತ ಎಂಟು ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಲ್ಯಾಣಿ ಕ್ರಷರ್ ಗುತ್ತಿಗೆಪಡೆದ ಸ್ಥಳದಲ್ಲಿ ಭಾನುವಾರ ಸಂಜೆ ನಡೆಸಿದ ಬ್ಲಾಸ್ಟಿಂಗ್‌ನಿಂದ ಗ್ರಾಮದಲ್ಲಿ ವಿಷಪೂರಿತ ಅನಿಲ ಸೋರಿಕೆಯಾದ ಅನುಭವವಾಗಿದೆ. ಅನೇಕರು ಅಸ್ವಸ್ಥಗೊಂಡಿದ್ದಾರೆ. ನಾಲ್ಕು ಜನ ತೀವ್ರವಾದ ವಾಂತಿಯನ್ನು ಮಾಡಿಕೊಂಡಿದ್ದಾರೆ. ಕಲ್ಲಿನ ಗಣಿಗಾರಿಕೆಗಳನ್ನು ಕೂಡಲೇ ಮುಚ್ಚಿಸಬೇಕು ಎಂದು ಗ್ರಾಮಸ್ಥರ ಪರವಾಗಿ ಒತ್ತಾಯಿಸಿದರು.
ಗ್ರಾಮಸ್ಥ ವೀರೇಶಪ್ಪ ಮಾತನಾಡಿ, ಕಲ್ಲುಗಣಿಗಾರಿಕೆಯಿಂದ ಗ್ರಾಮದಲ್ಲಿ ಬೋರ್‌ವೆಲ್‌ಗಳು ಬತ್ತಿಹೋಗಿವೆ. ಅಲ್ಲದೆ ಅನೇಕ ದನಕರುಗಳು ಸತ್ತಿವೆ. ಅನೇಕರಿಗೆ ಕಲ್ಲುಗಣಿಗಾರಿಕೆಯಿಂದ ಸಮಸ್ಯೆ ಉಂಟಾಗುತ್ತಿದೆ, ಮನೆಗಳು ಬಿರುಕು ಬಿಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.