ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಎಫ್ಎಕ್ಯೂ ಗುಣಮಟ್ಟದ ಸೋಯಾಬಿನ್ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ 4892 ರೂ. ರಂತೆ ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಪ್ರತಿ ಕ್ವಿಂಟಾಲ್ಗೆ 7,400 ರೂ. ದಂತೆ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಸೋಯಾಬಿನ್ ಉತ್ಪನ್ನವನ್ನು ಹಾಗೂ ಉದ್ದಿನಕಾಳು ಉತ್ಪನ್ನಗಳ ಮಾರಾಟಕ್ಕೆ ರೈತರಿಗೆ ನೋಂದಣಿ ಮಾಡಿಕೊಳ್ಳಲು ಸೆ.5 ರಿಂದ ಅ. 19ರವರೆಗೆ ಅವಕಾಶವಿದೆ. ಸೋಯಾಬಿನ್ ಹಾಗೂ ಉದ್ದಿನಕಾಳು ಉತ್ಪನ್ನಗಳನ್ನು ಖರೀದಿಸಲು ಸರ್ಕಾರದಿಂದ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಮತ್ತು ನವಲಗುಂದ ತಾಲೂಕುಗಳ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳಂತೆ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಪ್ರಮಾಣದ ಮೌಲ್ಯದ ಹಣವನ್ನು ಡಿಬಿಟಿ ಮೂಲಕ ಪಾವತಿ ಮಾಡಲಾಗುವುದು. ಆವರ್ತ ನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.