ಜಿಲ್ಲೆ

ಸೌರಭ ಸಂಗೀತ ನೃತ್ಯ ಕಲಾ ಪರಿಷತ್‌ನ ಮೂರು ದಶಕದ ಸೇವೆ ಅನನ್ಯ ಕರ್ನಾಟಕ ಸಂಭ್ರಮ 50 ಉದ್ಘಾಟಿಸಿ ಪ್ರೊ.ಎಚ್.ರವಿಶಂಕರ್ ರಾವ್ ಅಭಿಮತ

ಮಂಗಳೂರು: ಸೌರಭ ಸಂಗೀತ ನೃತ್ಯ ಕಲಾ ಪರಿಷತ್‌ನ ಮೂರು ದಶಕಗಳಿಗಿಂತ ಅಧಿಕ ಕಾಲದಿಂದ ಸಂಗೀತ ನೃತ್ಯ ಕ್ಷೇತ್ರದಲ್ಲಿ ಪ್ರಾಮಾಣಿಕ ಪ್ರಯತ್ನದ ಪರಿಪೂರ್ಣತೆಯನ್ನು ಸಾಧಿಸಿದ ಕಲಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ರವಿಶಂಕರ್ ರಾವ್ ಶ್ಲಾಘಿಸಿದರು.


ಸೌರಭ ಸಂಗೀತ ನೃತ್ಯ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದಲ್ಲಿ ಭಾನುವಾರ ಪುರಭವನದಲ್ಲಿ ನಡೆದ ಕರ್ನಾಟಕ ಸಂಭ್ರಮ 50 ನೃತ್ಯರೂಪಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ನೂರಾರು ನೃತ್ಯಾರ್ಥಿಗಳನ್ನು ರೂಪಿಸಿ ಯಶಸ್ಸು ಕಂಡಿರುವ ಸಂಸ್ಥೆ, ರಾಜ್ಯ, ರಾಷ್ಟ್ರ ಹಾಗೂ ವಿದೇಶದ ಕಲಾ ವೇದಿಕೆಗಳಲ್ಲಿ ಸೌರಭದ ಪತಾಕೆಯನ್ನು ಎತ್ತಿ ಹಿಡಿದು ನೃತ್ಯ ಪ್ರಸ್ತುತಿ, ಕಾರ್ಯಾಗಾರಗಳ ಮೂಲಕ ಅನಾವರಣಗೊಳಿಸಿದೆ ಎಂದರು.


ಇಂಟರ್‌ನ್ಯಾಷನಲ್ ಆರ್ಟ್ಸ್ ಆ್ಯಂಡ್ ಕಲ್ಚರಲ್ ಫೌಂಡೇಶನ್‌ನ ನಿರ್ದೇಶಕ ಶಾಂಡಿಲ್ಯ ಶ್ರೀವತ್ಸ, ಹುಬ್ಬಳ್ಳಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನಿರ್ದೇಶಕಿ ಡಾ.ಸಹನಾ ಭಟ್ ಅವರು ಮುಖ್ಯ ಅತಿಥಿಗಳಾಗಿದ್ದರು.


ಸಂಸ್ಥೆಯ ಅಧ್ಯಕ್ಷ ಕೆ.ರಾಮನ್, ಕಾರ್ಯದರ್ಶಿ ಶಾರದಾ ರಾಮನ್, ವಿದುಷಿ ಡಾ.ಶ್ರೀವಿದ್ಯಾ ಮುರಳೀಧರ್, ಅಭ್ಯುದಯ ಕೃಷ್ಣ ಹಾಗೂ ಅಭಿರಾಮ್ ಮುರಳೀಧರ್ ಉಪಸ್ಥಿತರಿದ್ದರು.

ನೃತ್ಯ ನಿರ್ದೇಶಕಿ ಡಾ.ಶ್ರೀವಿದ್ಯಾ ಮುರಳೀಧರ್ ಅವರ ನಿರ್ದೇಶನ ಮತ್ತು ನೃತ್ಯ ಸಂಯೋಜನೆಯಲ್ಲಿ ಸೌರಭ ಸಂಗೀತ ನೃತ್ಯ ಕಲಾ ಪರಿಷತ್‌ನ ಹಿರಿಯ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಭ್ರಮ 50 ನೃತ್ಯರೂಪಕ ಜರುಗಿತು. ಉಪನ್ಯಾಸಕಿ ವಿದ್ಯಾ ಶೇಡಿಗುಮ್ಮೆ ಕಾರ್ಯಕ್ರಮ ನಿರೂಪಿಸಿದರು.