ಜಿಲ್ಲೆ

ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ: ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ಪ್ರತಿಭಟನೆ

ಮಂಡ್ಯ: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ಮಾಡಬೇಕೆಂದು ಒತ್ತಾಯಿಸಿ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದ ಕಾರ್ಯಕರ್ತರು, ಧರ್ಮಸ್ಥಳದಲ್ಲಿ ಉಜಿರೆ ಕಾಲೇಜಿನ ವಿದ್ಯಾರ್ಥಿ ಸೌಜನ್ಯ ಅವರನ್ನು ಅತ್ಯಾಚಾರಗೈದು ಹತ್ಯೆ ಮಾಡಿರುವ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿರುವುದು ರಾಜ್ಯದ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಗೆ ಆದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರೇ ಸೌಜನ್ಯ ಪ್ರಕರಣ ಕುರಿತು ಮರು ತನಿಖೆಯಾಗಲಿ ಎಂದು ಆಗ್ರಹ ಮಾಡಿರುತ್ತಾರೆ. ಸೌಜನ್ಯ ಕೊಲೆಯೂ ಸೇರಿ ಅಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಮರುತನಿಖೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಿರುಪತಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಾಲಯದ ಆದಾಯವನ್ನು ಅಲ್ಲಿನ ಸರ್ಕಾರಗಳು ನಿರ್ವಹಣೆ ಮಾಡುತ್ತಿದೆ. ಅದೇ ರೀತಿ ಧರ್ಮಸ್ಥಳದ ದೇವಾಲಯ ಸೇರಿ ರಾಜ್ಯದಲ್ಲಿ ಅಧಿಕ ಆದಾಯ ಇರುವ ಮಸೀದಿ, ಚರ್ಚ್, ದೇವಾಲಯಗಳನ್ನು ವಶಕ್ಕೆ ಪಡೆದು ಹಣಕಾಸು ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.

ಪರಿಷತ್‌ನ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ವಕೀಲ ಬಿ.ಟಿ.ವಿಶ್ವನಾಥ್, ಎಸ್ಸಿ, ಎಸ್ಟಿ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ, ದುಂಡ ಲಿಂಗರಾಜ್, ಎಚ್.ಡಿ.ಜಯರಾಂ, ಶಿವರಾಜ್ ಮರಳಿಗ, ಎಸ್.ಮಹದೇವಯ್ಯ, ಮಹೇಂದ್ರ, ಕಿಶೋರ್ ಇತರರಿದ್ದರು.