ಆಲೂರು: ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ವಿವಿಧ ತಳಿಗಳ ಬಿತ್ತನೆ ಬೀಜ ದಾಸ್ತಾನೀಕರಿಸಿ ಸಹಾಯಧನದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಸ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಪ್ರತಿ ವರ್ಷದಂತೆ ಐಇಟಿ ತುಂಗಾ ತಳಿಯ ಭತ್ತದ ಬಿತ್ತನೆ ಬೀಜಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ. 2023-24 ನೇ ಸಾಲಿನಲ್ಲಿ ಬರದ ಪರಿಸ್ಥಿತಿ ಇದುದ್ದರಿಂದ ಬೀಜೋತ್ಪಾದನಾ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಹಾಗೂ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ನಿರೀಕ್ಷೆಗೆ ತಕ್ಕಂತೆ ತುಂಗಾ ತಳಿಯ ಬೀಜೋತ್ಪಾದನೆಯ ಗುರಿ ಸಾಧಿಸಲಾಗಿಲ್ಲ. ಪ್ರಸ್ತುತ ದಾಸ್ತಾನು ಇರುವ ತುಂಗಾ ತಳಿಯ ಭತ್ತದ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿ ರೈತರಿಗೆ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಪ್ರತಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ತುಂಗಾ ತಳಿಯನ್ನು ಹೊರತುಪಡಿಸಿ ಇತರ ಭತ್ತದ ತಳಿಗಳಾದ ಆರ್‌ಎನ್‌ಆರ್, ಐಆರ್-64, ತನು, ಬಿಆರ್-2655 ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಸಹಾಯಧನದಲ್ಲಿ ಪಡೆಯಬಹುದಾಗಿದೆ.
ಹೈಬ್ರೀಡ್ ಭತ್ತದ ಬಿತ್ತನೆ ಬೀಜಗಳಾದ ವಿಎನ್‌ಆರ್ 115 ಹಾಗೂ ಪಿಎಸಿ 837 ಸಹ ಸಹಾಯಧನದಲ್ಲಿ ಲಭ್ಯವಿದ್ದು, ರೈತರು ಸಹಾಯಧನದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಪಡೆಯಬಹುದಾಗಿದೆ.
ಆಲೂರು ತಾಲೂಕು ಖಾಸಗಿ ಬಿತ್ತನೆ ಬೀಜ ಮಾರಾಟಗಾರರ ಮಳಿಗೆಗಳಲ್ಲಿ ಸಹ ವಿವಿಧ ತಳಿಗಳ ಭತ್ತಗಳಾದ ಓಂಕಾರ್, ಸನ್ ಮಧು, ಪೆನ್ನಾ, ದಬಾಂಗ್, ವಿಎನ್‌ಆರ್ ಹಾಗೂ ಹಲವಾರು ತಳಿ ಲಭ್ಯ ಇವೆ. ಹಿಂದಿನ ವರ್ಷಗಳಲ್ಲಿ ತುಂಗಾ ಭತ್ತ ಬೆಳೆದಂತಹ ರೈತರು ಸಹ ತಮ್ಮಲ್ಲಿ ದಾಸ್ತಾನಿದ್ದ ಗುಣಮಟ್ಟದ ಬಿತ್ತನೆ ಬೀಜವನ್ನು ಈ ವರ್ಷದಲ್ಲಿ ಸಹ ಬಿತ್ತನೆಗೆ ಬಳಸಬಹುದಾಗಿದೆ.
ಒಟ್ಟಾರೆ ಆಲೂರು ತಾಲೂಕಿನಲ್ಲಿ ಭತ್ತದ ಬಿತ್ತನೆ ಬೀಜದ ತಳಿ ಹಾಗೂ ಹೈಬ್ರೀಡ್‌ಗಳಿಗೆ ಯಾವುದೇ ಕೊರತೆ ಇಲ್ಲ ಎಂದು ರಮೇಶ್ ಹೇಳಿದ್ದಾರೆ.