ಹರಪನಹಳ್ಳಿ ಕೃಷಿಕ ಸಮಾಜದಿಂದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಉಪಾಧ್ಯಕ್ಷ ವಿಜಯಪ್ಪ, ಪುರಸಭೆ ಸದಸ್ಯ ಲಾಟಿ ದಾದಪೀರ, ತೋಟಗಾರಿಕೆ ಇಲಾಖೆಯ ಜಯಸಿಂಹ, ಸಾಮಾಜಿಕ ವಲಯ ಅರಣ್ಯಾಧಿಕಾರಿ ದೇವರಾಜ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ ಇತರರಿದ್ದರು. 
ಜಿಲ್ಲೆ

ಬಿತ್ತನೆ ಬೀಜ-ರಸಗೊಬ್ಬರದ ಕೊರತೆ ಇಲ್ಲ

ಹರಪನಹಳ್ಳಿ: ರೈತರು ನರೇಗಾ ಯೋಜನೆಯಡಿ ಸಹಾಯಧನ ಪಡೆದು ಕುರಿ-ಮೇಕೆ ಸಾಕಣೆ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕೃಷಿ ಇಲಾಖೆಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಮೂರು ಸಾವಿರ ಕುರಿ-ಮೇಕೆ ಶೆಡ್ ನಿರ್ಮಿಸಿಕೊಳ್ಳಲು ನರೇಗಾದಲ್ಲಿ ಅವಕಾಶವಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ತಾಲೂಕಿನಲ್ಲಿ ರೈತರಿಗೆ ಸದ್ಯಕ್ಕೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ. ಕೃಷಿಕ ಸಮಾಜ ಭವನ ನಿರ್ಮಾಣದ ಹತ್ತಿರ ಬೋರ್‌ವೆಲ್‌ನ ಅವಶ್ಯಕತೆ ಇದೆ ಎಂದು ಗಮನಕ್ಕೆ ತಂದಿದ್ದು ಆದಷ್ಟು ಬೇಗ ವ್ಯವಸ್ಥೆ ಮಾಡಲಾಗುವುದು ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿ.ಸಿ.ಉಮ್ಮೇಶ ಮಾತನಾಡಿ, ಇತ್ತೀಚೆಗೆ ರೈತರು ಹೊರಗಿನ ರಸಗೊಬ್ಬರಕ್ಕೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದರಿಂದ ಕೃಷಿ ಖರ್ಚು ಜಾಸ್ತಿಯಾಗಿ ಆದಾಯ ಕಡಿಮೆಯಾಗುತ್ತದೆ. ರೈತರು ಸಾವಯವ ಗೊಬ್ಬರ ಬಳಕೆ ಮಾಡಬೇಕು. ಇದರಿಂದ ಹೆಚ್ಚು ಇಳುವರಿ ಜೊತೆಗೆ ಅಧಿಕ ಆದಾಯಗಳಿಸಬಹುದು ಎಂದರು.

ರೈತರು ಸ್ಥಳೀಯವಾಗಿ ಸಿಗುವ ಕೃಷಿ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಮೌಲ್ಯವರ್ಧನ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ತಾವೇ ಉದ್ಯಮಿಗಳಾಗಬೇಕು. ವ್ಯಾಪಾರ-ವಹಿವಾಟು ತಾವೇ ನಡೆಸಬೇಕು ಆಗ ಆರ್ಥಿಕವಾಗಿ ಮುಂದೆ ಬರಬಹುದು ಎಂದರು. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ, ತಾಲೂಕು ಅಧ್ಯಕ್ಷ ಮಡಿವಾಳಪ್ಪ ಮಾತನಾಡಿದರು.