ಚನ್ನಪಟ್ಟಣ: ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕಿನ ಅಬ್ಬೂರು ಗುಡ್ಡದಲ್ಲಿ ಬಾಲು ಪಬ್ಲಿಕ್ ಶಾಲೆ, ಒನ್ ಭೂಮಿ ಫೌಂಡೇಷನ್, ಚನ್ನಪಟ್ಟಣ ಹಾಗೂ ಮೈಸೂರಿನ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ‘ಒಂದು ಹೆಜ್ಜೆ ಒಂದು ಬೀಜ’ ಕಾರ್ಯಕ್ರಮದಡಿ ಅರಣ್ಯೀಕರಣ ಹಾಗೂ ಹಸಿರು ಹೆಜ್ಜೆ ಬೀಜ ಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
30,000 ಸ್ಥಳೀಯ ಮರದ ಬೀಜಗಳನ್ನು ಬಿತ್ತಲಾಯಿತು. ಶಾಲೆಯ ಜಂಟಿ ಕಾರ್ಯದರ್ಶಿ ವಿ.ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಒನ್ ಭೂಮಿ ಫೌಂಡೇಷನ್ ಸದಸ್ಯರು ಭಾಗವಹಿಸಿ, ಹೊಂಗೆ, ಬೇವು, ಹುಣಸೆ ಮುಂತಾದ ವಿವಿಧ ರೀತಿಯ ಬೀಜ ಹಾಗೂ ಸಸಿ ನೆಟ್ಟರು.
ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದು, ಪ್ರಕೃತಿ ಪೋಷಿಸುವ ಕಾಯಕದಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದು ಹೇಗೆ? ಭವಿಷ್ಯದಲ್ಲಿ ಉತ್ತಮ ಹಸಿರು ಭೂಮಿಯನ್ನು ನೀಡುವಲ್ಲಿ ಶ್ರಮದಾನ ಎಷ್ಟು ಅವಶ್ಯ ಎಂಬುದನ್ನು ಕಾರ್ಯಕ್ರಮದಲ್ಲಿ ಸಾರಲಾಯಿತು.