ಮಂಡ್ಯ: ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಏನು ಕೊಡುಗೆಯನ್ನು ನೀಡಲಿಲ್ಲ. ಸಾಧನೆಯನ್ನೂ ಮಾಡಲಿಲ್ಲ. ಆದ್ದರಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮನ್ನು ಟೀಕೆ ಮಾಡುವುದಷ್ಟೇ ಅವರಿಗೆ ಉಳಿದಿರುವ ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಎನ್‌ಪಿಎಸ್ ಅನ್ನು ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಬಹುದಿತ್ತು. ಮಾತ್ರವಲ್ಲದೆ ಅವರ ಸರ್ಕಾರದ ಅವಧಿಯಲ್ಲಿಯೇ ಏಳನೇ ವೇತನ ಆಯೋಗವನ್ನು ಅನುಷ್ಠಾನ ಮಾಡಬಹುದಿತ್ತು. ಆಗ ಏನು ಮಾಡದೇ ಈಗ ನಮ್ಮ ಟೀಕಿಸುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ಜೂನ್ ನಂತರ ಏಳನೇ ವೇತನ ಆಯೋಗ ಅನುಷ್ಠಾನ ಹಾಗೂ ಎನ್‌ಪಿಎಸ್ ರದ್ದುಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಕಾನೂನಾತ್ಮಕವಾಗಿ ಕೆಲ ತೊಡಕುಗಳಿರುವುದರಿಂದ ಎಲ್ಲವನ್ನೂ ಸರಿಪಡಿಸಿ ಶಿಕ್ಷಕರಿಗೆ ಅನುಕೂಲ ಮಾಡಲಾಗುವುದು. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲವಾಗಿದೆ. ಈ ಎಲ್ಲವೂ ಶಿಕ್ಷಕ ವರ್ಗಕ್ಕೆ ಗೊತ್ತಿದೆ ಎಂದ ಅವರು, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಅವಕಾಶ ಕೈತಪ್ಪಿರುವುದಕ್ಕೆ ಅಸಮಾಧಾನವಿದೆ. ಅದೇ ರೀತಿ ಶಿಕ್ಷಕ ಕ್ಷೇತ್ರದ ಪರಿಚಯವೇ ಇಲ್ಲದ ಅಭ್ಯರ್ಥಿಗೆ ಯಾವ ಕಾರಣಕ್ಕೆ ಅವಕಾಶ ನೀಡಲಾಗಿದೆಯೋ ಗೊತ್ತಿಲ್ಲ. ಇನ್ನು ಪೆನ್‌ಡ್ರೈವ್ ಪ್ರಕರಣದ ಬಗ್ಗೆಯೂ ಗೊತ್ತಿದೆ. ಅಧಿಕಾರದ ಪ್ರಭಾವ ಬಳಸಿ ಹೆಣ್ಣು ಮಗಳನ್ನು ಬಳಿಸಿಕೊಂಡು ಈ ರೀತಿ ಮಾಡಿದರೆ ಎಲ್ಲಾ ಕಡೆ ಪ್ರಭಾವ ಬೀರುತ್ತದೆ. ಈ ಎಲ್ಲವೂ ಚುನಾವಣೆಯಲ್ಲಿ ಪರಿಣಾಮ ಆಗಲಿದೆ ಎಂದರು.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ನಮ್ಮ ಪಕ್ಷದ ಅಭ್ಯರ್ಥಿ. ಜೆಡಿಎಸ್ ಚುನಾವಣೆಗೆ ಮುಂಚಿತವಾದ ಮೈತ್ರಿ ಇದೇ ಮೊದಲ ಬಾರಿಗೆ ಆಗಿದೆ. ಆದರೂ ಮೈತ್ರಿ ವಿರುದ್ಧವಾಗಿ ಬೆಂಗಳೂರು, ರಾಮನಗರ ಮತದಾರರು ಮತ ನೀಡಿ ಪುಟ್ಟಣ್ಣರ ಗೆಲುವು ಕಂಡರು. ಮೈತ್ರಿ ಬಗ್ಗೆ ಎಚ್ಡಿಕೆಯೇ ಅಪಸ್ವರ ಎತ್ತಿದ್ದರು. ಆನಂತರ ಬಿಜೆಪಿ-ಜೆಡಿಎಸ್ ಒಲ್ಲದ ಮನಸ್ಸಿನಿಂದ ಸಂಬಂಧ ಮುಂದುವರೆಸಿವೆ. ಪ್ರಸ್ತುತ ಪರಿಷತ್ ಚುನಾವಣೆಯಲ್ಲೂ ಜೆಡಿಎಸ್‌ಗೆ ಒಂದೇ ಒಂದು ಸ್ಥಾನ ಕೊಟ್ಟಿದ್ದರು. ಆನಂತರ ಕಾಡಿಬೇಡಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನೂ ಜೆಡಿಎಸ್ ಪಡೆಯಿತು. ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನುಭವಿ. ತನ್ನ ಅಧಿಕಾರವಧಿಯಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ಆತಂಕ ಇಲ್ಲದೇ ನಾವು ಗೆಲ್ಲುತ್ತೇವೆ. ನಾವೆಲ್ಲರೂ ಸಾಮೂಹಿಕ ನಾಯಕತ್ವದಡಿ ಚುನಾವಣೆ ಮಾಡುತ್ತಿದ್ದೇವೆ. ಶಿಕ್ಷಕರ ಪರ ಮರಿತಿಬ್ಬೇಗೌಡರು ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನ ನೀಡಲು ಮನವಿ ಮಾಡಿದರು.