ಜಿಲ್ಲೆ

ವಾಲಿಬಾಲ್ ಟೂರ್ನಿಗೆ ಅದ್ದೂರಿ ಚಾಲನೆ: ಪಿಇಟಿ ಕ್ಯಾಂಪಸ್‌ನಲ್ಲಿ ಕ್ರೀಡಾ ಕಲರವ

ಮಂಡ್ಯ: ಹದಿನೈದು ವರ್ಷದ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ನಾಲ್ಕು ದಿನದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ಅದ್ದೂರಿ ಚಾಲನೆ ನೀಡಲಾಯಿತು.
ಪಿಇಟಿ ಮಂಡ್ಯ ಹಾಗೂ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಗರದ ಪಿಇಟಿ ಕ್ಯಾಂಪಸ್‌ನಲ್ಲಿ ಸಿದ್ಧಪಡಿಸಲಾಗಿರುವ ಅಂಕಣದಲ್ಲಿ ಗಣ್ಯರು ಬಲೂನ್‌ಗಳನ್ನು ಆಕಾಶಕ್ಕೆ ಬಿಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ತಂಡ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.
ಟೂರ್ನಿಗೆ ಚಾಲನೆ ನೀಡಿ ಕನ್ನಡದಲ್ಲಿ ಮಾತು ಆರಂಭಿಸಿದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲ್ಜೀತ್ ಸಿಂಗ್ ಸೆಖೊನ್, ಪಿಇಟಿ ಸಂಸ್ಥೆಯ ಸಂಸ್ಥಾಪಕರೂ ಆದ ನಿತ್ಯಸಚಿವ ಕೆ.ವಿ.ಶಂಕರಗೌಡರಿಗೆ ನಮಿಸುವುದರ ಜತೆಗೆ ಟೂರ್ನಿಯ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಿರುವ ವಾಲಿಬಾಲ್ ಕ್ರೀಡಾಕೂಟಗಳಲ್ಲಿ ಭಾರತದ, ಅದರಲ್ಲಿಯೂ ರಾಜ್ಯದ ಕ್ರೀಡಾಪಟುಗಳು ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ತರಬೇತಿ ಸೇರಿದಂತೆ ಸೌಲಭ್ಯ ನೀಡಬೇಕಿದೆ. ಕಳೆದ 18 ವರ್ಷದ ಇತಿಹಾಸ ಗಮನಿಸಿದರೆ ಜಾಗತಿಕ ವಿಶ್ವವಿದ್ಯಾಲಯ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಕೇವಲ 18 ಪದಕ ಗೆದ್ದಿದ್ದರು. ಆದರೆ, ಈ ಒಂದೇ ವರ್ಷದಲ್ಲಿ 26 ಪದಕಗಳಿಗೆ ಕೊರಳೊಡ್ಡಿದ್ದಾರೆ. ಇದು ವಿಶ್ವವಿದ್ಯಾಲಯ ಮಟ್ಟದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದಸ್ಪರ್ಧಿಗಳು ಪಾರಮ್ಯ ಮೆರೆದಿರುವ ಧ್ಯೋತಕ ಹಾಗೂ ಮುಂಬರುವ ಕ್ರೀಡಾಕೂಟಗಳಲ್ಲಿ ಇಂತಹ ಇನ್ನಷ್ಟು ಸಾಧನೆ ಮರುಕಳಿಸುವ ಸೂಚನೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ವಾಲಿಬಾಲ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸುವುದಾಗಿ ಪ್ರಕಟಿಸಿದ ಅವರು, ಜರ್ಮನಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ವಾಲಿಬಾಲ್ ಕ್ರೀಡಾಕೂಟಕ್ಕೆ ತಂಡಗಳನ್ನು ಕಳುಹಿಸಲಾಗುವುದು. ಅದಕ್ಕಾಗಿ ಅತ್ಯುತ್ತಮ ಕ್ರೀಡಾಳುಗಳನ್ನು ವಿಶ್ವವಿದ್ಯಾಲಯಗಳು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಬೇಕು. ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳ ಸಾಧನೆ ಗಮನಾರ್ಹವಾಗಿದೆ. ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ 270 ವಿವಿಧ ವಿವಿಗಳು ಪಾಲ್ಗೊಂಡಿದ್ದವು. ಅದರಲ್ಲಿ ಪಿಇಎಸ್ ಹಾಗೂ ಬೆಳಗಾವಿ ತಂಡ ಪಾಲ್ಗೊಂಡಿದ್ದು ವಿಶೇಷ. ಜತೆಗೆ ಮುಂದಿನ ವಿಶ್ವವಿದ್ಯಾಲಯ ಮಟ್ಟದ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಕರ್ನಾಟಕ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ವಾಲಿಬಾಲ್ ಕ್ರೀಡೆಗೆ ಅತ್ಯುತ್ತಮ ಅವಕಾಶಗಳಿವೆ. ರಾಜ್ಯದಲ್ಲಿ ಸರ್ಕಾರಿ ಕ್ರೀಡಾ ವಿಶ್ವವಿದ್ಯಾಲಯವಿದೆ. ಜತೆಗೆ ಕ್ರೀಡಾ ಇಲಾಖೆಯಿಂದ ಸೂಕ್ತ ಉತ್ತೇಜನವೂ ದೊರೆಯುತ್ತಿದೆ. ಸಿಗುವ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಹೊರಹಾಕಬೇಕು. ಸ್ವಲ್ಪ ಪರಿಶ್ರಮದ ಮೂಲಕ ಸಾಧನೆಗಳನ್ನು ಮಾಡಬೇಕೆಂದು ಕರೆ ನೀಡಿದರು.

ಬೆಳಗಾವಿ ವಿಟಿಯು ಕುಲಪತಿ ಡಾ. ಎಸ್.ವಿದ್ಯಾಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು. ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಎಂದು ತಿಳಿ ಹೇಳಿದರು.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಬಿ.ಎಸ್.ಹರಿಪ್ರಸಾದ್, ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಟ್ರಸ್ಟಿ ಡಾ.ರಾಮಲಿಂಗಯ್ಯ, ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರಾದ ಅನಂತಪದ್ಮನಾಭ ಪ್ರಭು, ಆರ್.ವಿದ್ಯಾ ಇತರರಿದ್ದರು.