ಮಂಡ್ಯ: ಬರೋಬರಿ ಹದಿನೈದು ವರ್ಷದ ಬಳಿಕ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್ ಚಾಂಪಿಯನ್‌ಶಿಪ್‌ನ ಆತಿಥ್ಯ ಕರ್ನಾಟಕಕ್ಕೆ ಒಲಿದುಬಂದಿದೆ. ಅದು ಕೂಡ ಮೊದಲ ಬಾರಿಗೆ ಮಂಡ್ಯಕ್ಕೆ ಸಿಕ್ಕಿದ್ದು, ಪ್ರತಿಷ್ಠಿತ ಪಿಇಟಿ ಶಿಕ್ಷಣ ಸಂಸ್ಥೆ ಮಹತ್ವದ ಜವಾಬ್ದಾರಿಯ ಹೊಣೆ ಹೊತ್ತಿದೆ.
ಮಂಗಳೂರಿನ ಬಳಿಕ ಮಂಡ್ಯದಲ್ಲಿ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಪಿಇಟಿ ಮಂಡ್ಯ ಹಾಗೂ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಡಿ.22ರಿಂದ 25ರವರೆಗೆ ಪಂದ್ಯಾವಳಿ ನಡೆಯಲಿದ್ದು, ಸುಮಾರು 1,500 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಹಗಲು ಹಾಗೂ ಹೊನಲು ಬೆಳಕಿನ ಟೂರ್ನಿಗೆಂದು ಪಿಇಟಿ ಕ್ಯಾಂಪಸ್‌ನಲ್ಲಿ ಉತ್ತಮ ಗುಣಮಟ್ಟದ ಎಂಟು ಅಂಕಣ ಸಜ್ಜುಗೊಂಡಿವೆ. ಮಾತ್ರವಲ್ಲದೆ ಕನ್ನಡ ನಾಡಿನ ಹಿರಿಮೆ ಸಾರುವಂತಹ ನಾಡಧ್ವಜದ ಸಂಕೇತವಾಗಿರುವ ಹಳದಿ, ಕೆಂಪು ಬಣ್ಣದ ವಸ್ತ್ರದಿಂದ ಕ್ರೀಡಾಂಗಣ ಕಂಗೊಳಿಸುತ್ತಿದೆ.
ರಾಷ್ಟ್ರಮಟ್ಟದ ಆಟಗಾರರ ಕಮಾಲ್: ಪ್ರತಿಕ್ಷಣವೂ ರೋಚಕ ಎನಿಸುವ ವಾಲಿಬಾಲ್ ಟೂರ್ನಿಯ ಮೆರಗು ಹೆಚ್ಚಿಸಲು ರಾಷ್ಟ್ರ ತಂಡವನ್ನು ಪ್ರತಿನಿಧಿಸಿರುವ ಆಟಗಾರರು ಭಾಗವಹಿಸಲಿದ್ದಾರೆ. ಒಟ್ಟು 125 ತಂಡಗಳು ಪ್ರಶಸ್ತಿಗೆ ಸೆಣಸಾಡಲಿವೆ. ಕರ್ನಾಟಕದಿಂದ 36, ಆಂಧ್ರಪ್ರದೇಶದ 24, ತೆಲಂಗಾಣದ 14, ತಮಿಳುನಾಡಿನ 39, ಕೇರಳದ 9 ಹಾಗೂ ಪುದುಚೇರಿಯ 1 ತಂಡ ಪಾಲ್ಗೊಳ್ಳಲಿವೆ. ಈಗಾಗಲೇ ನಾಲ್ಕು ಗ್ರೂಪ್‌ಗಳಿಗೆ ತಂಡವನ್ನು ಹಂಚಿಕೆ ಮಾಡಿ ವೇಳಾಪಟ್ಟಿಯೂ ಸಿದ್ಧಗೊಂಡಿದೆ. ಪ್ರಮುಖವಾಗಿ ಕಳೆದ ಸಾಲಿನ ಟೂರ್ನಿಯಲ್ಲಿ ವಿಜೇತ, ರನ್ನರ್‌ಅಪ್, ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳಿರಲಿವೆ.
ವಾಲಿಬಾಲ್ ಫೆಡರೇಷನ್‌ನಿಂದ ಅರ್ಹತೆ ಪಡೆದಿರುವ ರಾಷ್ಟ್ರ, ರಾಜ್ಯಮಟ್ಟದ 52 ಜನ ತೀರ್ಪುಗಾರರಾಗಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ 30 ವಿದ್ಯಾರ್ಥಿಗಳು ಲೈನ್ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಎಂಟು ಅಂಕಣದ ಪೈಕಿ ನಾಲ್ಕರಲ್ಲಿ ಹೊನಲು ಬೆಳಕಿನ ಪಂದ್ಯಾಟ ನಡೆಯಲಿದೆ. ಬೆಳಗ್ಗೆ 7.30ರಿಂದ 12 ಗಂಟೆ ಹಾಗೂ 2 ಗಂಟೆಯಿಂದ ರಾತ್ರಿ 11ರವರೆಗೆ ಪಂದ್ಯ ಇರಲಿದೆ. ಕೊನೆಯ ಎರಡು ದಿನ ಟೂರ್ನಿಯ ನೇರ ಪ್ರಸಾರವಿರಲಿದೆ. ಪ್ರಮುಖವಾಗಿ ಈ ಟೂರ್ನಿಯ ಮೂಲಕ ಭವಿಷ್ಯದ ತಾರೆಯರ ಆಯ್ಕೆ ನಡೆಯಲಿದೆ. ಒಟ್ಟಾರೆ ನಾಲ್ಕು ದಿನ ಕ್ರೀಡಾಸಕ್ತರಿಗೆ ರಸದೌತಣ ಸಿಗುವುದರಲ್ಲಿ ಅನುಮಾನವಿಲ್ಲ.
ಪ್ರತಿಷ್ಠಿತ ಟೂರ್ನಿಗೆ ಭರದ ಸಿದ್ಧತೆ: ಶೈಕ್ಷಣಿಕ ಚಟುವಟಿಕೆ ಜತೆಗೆ ಕ್ರೀಡಾಕೂಟ ಆಯೋಜನೆಗಳ ವಿಚಾರದಲ್ಲಿ ಎಂದೂ ರಾಜೀ ಮಾಡಿಕೊಳ್ಳದ ಪಿಇಟಿ, ವಾಲಿಬಾಲ್ ಟೂರ್ನಿಗೆಂದು ಕಳೆದೊಂದು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದೆ. ಸಂಸ್ಥೆಯ ಅಧ್ಯಕ್ಷ ಕೆ.ಎಸ್.ವಿಜಯಾನಂದ ನೇತೃತ್ವದಲ್ಲಿ ತಯಾರಿ ನಡೆದಿದೆ. ವಿಟಿಯು ಆರ್ಥಿಕ ನೆರವಿನ ಜತೆಗೆ ಸಂಸ್ಥೆಯಿಂದಲೂ ಲಕ್ಷಾಂತರ ರೂ ವ್ಯಯಿಸಲಾಗಿದೆ.
ಜಿಲ್ಲೆಗೆ ಆಗಮಿಸಿರುವ ಕ್ರೀಡಾಪಟುಗಳು ಹಾಗೂ ತರಬೇತುದಾರರು, ಸಹಾಯಕರ ವಾಸ್ತವ್ಯಕ್ಕೆಂದು 110 ಕೊಠಡಿಯನ್ನು ಕಾಯ್ದಿರಿಸಲಾಗಿದೆ. ಜತೆಗೆ ಗುಣಮಟ್ಟದ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ದಕ್ಷಿಣ ಹಾಗೂ ಉತ್ತರ ಭಾರತ ಶೈಲಿಯ ಆಹಾರವನ್ನು ನೀಡಲಾಗುತ್ತಿದೆ. ಪ್ರಮುಖ ಅಂಶವೆಂದರೆ ರಾಷ್ಟ್ರಕವಿ ಕುವೆಂಪು ಅವರಿಂದ ನಿತ್ಯ ಸಚಿವರೆಂದು ಪ್ರಶಂಸೆಗೊಳಗಾಗಿದ್ದ ಜಿಲ್ಲೆಯ ಹಿರಿಯ ಸಹಕಾರಿ ಹಾಗೂ ಶೈಕ್ಷಣಿಕ ಕ್ಷೇತ್ರದ ರೂವಾರಿ ಕೆ.ವಿ.ಶಂಕರಗೌಡರು ಸ್ಥಾಪಿಸಿದ ಪಿಇಟಿ ಸಂಸ್ಥೆಗೆ ಟೂರ್ನಿಯ ಆತಿಥ್ಯ ದೊರೆತಿದೆ.