ಮಂಡ್ಯ: ನಗರದ ಪಿಇಟಿ ಕ್ರೀಡಾ ಸಮುಚ್ಛಯದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಚಾಂಪಿಯನ್‌ಶಿಪ್ ನಿರ್ಣಾಯಕ ಹಂತ ತಲುಪಿದೆ. ಅದರಂತೆ ಸೋಮವಾರ ಚಾಂಪಿಯನ್ ಪಟ್ಟಕ್ಕಾಗಿ ನಾಲ್ಕು ತಂಡದ ನಡುವೆ ರೋಚಕ ಹಣಾಹಣಿ ನಡೆಯಲಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ತಮಿಳುನಾಡು ಚೆನ್ನೈನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಕೇರಳದ ಕ್ಯಾಲಿಕಟ್ ಯೂನಿವರ್ಸಿಟಿ, ಮಂಗಳೂರು ವಿಶ್ವವಿದ್ಯಾಲಯ, ಚೆನ್ನೈನ ಮದ್ರಾಸ್ ಯೂನಿವರ್ಸಿಟಿ ಸೆಮಿೈನಲ್ ಪ್ರವೇಶಿಸಿದೆ. ಸೋಮವಾರ ಅಂತಿಮ ಪಂದ್ಯಾಟ ನಡೆಯಲಿದ್ದು, ಯಾರ ಮುಡಿಗೆ ಗೆಲುವಿನ ಕಿರೀಟ ಸಿಗಲಿದೆ ಎನ್ನುವುದಕ್ಕೆ ತೆರೆಬೀಳಲಿದೆ.
ಪಿಇಎಸ್ ಮಂಡ್ಯ ಹಾಗೂ ಬೆಳಗಾವಿ ವಿಟಿಯು ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕು ದಿನದ ಟೂರ್ನಿಗೆ 125 ತಂಡಗಳು ಪಾಲ್ಗೊಂಡಿದ್ದವು. ಅದರಂತೆ ನಾಲ್ಕು ತಂಡ ಅಂತಿಮ ಹಂತ ತಲುಪಿವೆ. ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೆನ್ನೈನ ಎಸ್‌ಆರ್‌ಎಂ ತಂಡ ತಮಿಳುನಾಡಿನ ಭಾರತಿದಾಸನ್ ವಿವಿಯನ್ನು, ಕೇರಳದ ಕ್ಯಾಲಿಕಟ್ ಯೂನಿವರ್ಸಿಟಿ ಕೇರಳದ ಕಣ್ಣೂರು ವಿವಿ, ಚೆನ್ನೈನ ಮದ್ರಾಸ್ ಯೂನಿವರ್ಸಿಟಿ ತಮಿಳುನಾಡಿನ ಕರ್ಪಗಮ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ತಂಡವನ್ನು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರು ವಿವಿಯನ್ನು ಸೋಲಿಸಿ ಸೆಮಿೈನಲ್ ಪ್ರವೇಶಿಸಿದವು.
ವಿಶೇಷವೆಂದರೆ ಈ ನಾಲ್ಕು ತಂಡವೇ ಕಳೆದ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದವು. ಅಂತಿಮವಾಗಿ ಎಸ್‌ಆರ್‌ಎಂಇ(ಪ್ರ), ಕೇರಳದ ಕ್ಯಾಲಿಕಟ್ ಯೂನಿವರ್ಸಿಟಿ(ರನ್ನರ್), ಮಂಗಳೂರು ವಿಶ್ವವಿದ್ಯಾಲಯ(ಮೂರನೇ), ಚೆನ್ನೈನ ಮದ್ರಾಸ್ ಯೂನಿವರ್ಸಿಟಿ(ನಾಲ್ಕನೇ) ಸ್ಥಾನದೊಂದಿಗೆ ನೇರವಾಗಿ ಕ್ವಾರ್ಟಲ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದವು.
ಚಾಂಪಿಯನ್ ಯಾರು?: ಟೂರ್ನಿಯಲ್ಲಿ ಚಾಂಪಿಯನ್ ಯಾರೆಂದು ನಿರ್ಣಯಿಸಲು ಲೀಗ್ ಮಾದರಿ ಮ್ಯಾಚ್ ನಡೆಯಲಿದೆ. ಸೆಮಿಫೈನಲ್ ಪ್ರವೇಶ ಪಡೆದಿರುವ ನಾಲ್ಕು ತಂಡವೂ ಎದುರಾಳಿಯೊಂದಿಗೆ ಒಂದೊಂದು ಪಂದ್ಯವಾಡಲಿದೆ. ಇದರಲ್ಲಿ ಯಾರು ಹೆಚ್ಚು ಅಂಕ ಗಳಿಸುತ್ತಾರೋ ಅವರೇ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸುತ್ತಾರೆ.