ಮಂಡ್ಯ: ಸಂಸತ್ ಅಖಾಡದ ಫಲಿತಾಂಶ ಹೊರಬಿದ್ದಿದೆ. ಆದರೀಗ ಎಲ್ಲರ ಗಮನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ರಿಸಲ್ಟ್‌ನತ್ತ ಹರಿದಿದೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಕಾಂಗ್ರೆಸ್, ಜಿಲ್ಲಾ ರಾಜಕೀಯದಲ್ಲಿ ಮತ್ತೆ ಹಿಡಿತ ಸಾಧಿಸಬೇಕಾದರೆ ಎಂಎಲ್‌ಸಿ ಕಣದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣಾ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯದಲ್ಲಿ ಈ ಚುನಾವಣೆ ಗೆಲುವು ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಅವಶ್ಯಕವಾಗಿದೆ. ಮಾತ್ರವಲ್ಲದೆ ಎರಡು ಪಕ್ಷದ ಇಬ್ಬರು ಅಭ್ಯರ್ಥಿಗಳು ಜಿಲ್ಲೆಯವರೇ ಆಗಿರುವುದರಿಂದ ಫಲಿತಾಂಶಕ್ಕೆ ಜಿಲ್ಲೆಯ ಜನರು ಕಾಯುತ್ತಿದ್ದಾರೆ.
ಮರಿತಿಬ್ಬೇಗೌಡರಿಗೆ ಅಸ್ಥಿತ್ವದ ಪ್ರಶ್ನೆ: ಸತತ ನಾಲ್ಕು ಪರಿಷತ್ ಚುನಾವಣೆಯಲ್ಲಿ ಗೆದ್ದು ಬೀಗಿರುವ ಮರಿತಿಬ್ಬೇಗೌಡ ಅವರಿಗೆ ಈ ಬಾರಿಯ ಫಲಿತಾಂಶ ಮಹತ್ವದ್ದಾಗಿದೆ. ಮಾತ್ರವಲ್ಲದೆ ಅವರ ರಾಜಕೀಯದ ಅಸ್ಥಿತ್ವದ ಪ್ರಶ್ನೆಯಾಗಿದೆ. ಅದರಲ್ಲಿಯೂ ಜೆಡಿಎಸ್ ವಿರುದ್ಧ ತೊಡೆ ತಟ್ಟಿರುವುದರಿಂದ ಗೆಲುವು ಅನಿವಾರ್ಯವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಸತತ ನಾಲ್ಕು ಬಾರಿಗೆ ಆಯ್ಕೆಯಾಗಿ ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮಳವಳ್ಳಿ ತಾಲೂಕು ಅಂಚೆದೊಡ್ಡಿ ಗ್ರಾಮದ ರೈತ ಕುಟುಂಬದ ಮರಿತಿಬ್ಬೇಗೌಡ ಅವರು ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶ ಪಡೆದ ಮರಿತಿಬ್ಬೇಗೌಡ, ಆದರೆ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿ 2000ರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಎಂಎಲ್‌ಸಿ ಆಗಿ ಆಯ್ಕೆಯಾಗುತ್ತಾರೆ. ನಂತರ ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ಹೊರಬಂದು 2006ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸುತ್ತಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಸೇರ್ಪಡೆಯಾಗುವ ಮರಿತಿಬ್ಬೇಗೌಡ 2012 ಹಾಗೂ 2018ರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಉಪಸಭಾಪತಿಯಾಗುತ್ತಾರೆ. ಈ ಮೂಲಕ ಸತತ ನಾಲ್ಕು ಬಾರಿ ಗೆದ್ದ ದಾಖಲೆ ಬರೆದಿದ್ದಾರೆ.
ಚಿಂತಕರ ಚಾವಡಿ ಎನ್ನಿಸಿಕೊಂಡಿರುವ ವಿಧಾನ ಪರಿಷತ್‌ನಲ್ಲಿ ತಮ್ಮ ಕ್ಷೇತ್ರಕ್ಕೆ ಸೀಮಿತವಾಗದೇ ರೈತರು ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಮರಿತಿಬ್ಬೇಗೌಡ ಗಮನಸೆಳೆದಿದ್ದಾರೆ. ಆದರೆ ಈ ಬಾರಿಯ ಚುನಾವಣೆ ಮರಿತಿಬ್ಬೇಗೌಡರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಹಾಲಿ ಜೆಡಿಎಸ್ ಸದಸ್ಯರಾಗಿದ್ದರೂ ಸ್ವ ಪಕ್ಷದ ವಿರುದ್ಧವೇ ಬಂಡಾಯ ಸಾರಿದರು. ಮಾತ್ರವಲ್ಲದೆ ದಕ್ಷಿಣ ಪದವೀಧರ ಕ್ಷೇತ್ರ, ವಿಧಾನಸಭೆ ಚುನಾವಣೆಯಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್ ಪರ ಮತಯಾಚನೆ ಮಾಡಿದ್ದರು. ಇತ್ತೀಚೆಗೆ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಅಭ್ಯರ್ಥಿ ಮಾಜಿ ಎಂಎಲ್ಸಿ ಮರಿತಿಬ್ಬೇಗೌಡ
ಆದರೆ ಪರಿಷತ್ ಚುನಾವಣೆಯಲ್ಲಿ ಕೆಲವೊಂದು ಅಂಶಗಳು ಮರಿತಿಬ್ಬೇಗೌಡರಿಗೆ ನಕರಾತ್ಮಕವಾದಂತೆ ಕಾಣುತ್ತಿವೆ. ಪ್ರಮುಖವಾಗಿ ಜೆಡಿಎಸ್‌ನಿಂದ ಹೊರಬಂದ ನಂತರ ಮತ್ತು ಅದಕ್ಕೂ ಮೊದಲು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಟುವಾಗಿ ಟೀಕೆ ಮಾಡಿದ್ದರು. ಇದು ಒಕ್ಕಲಿಗ ಸಮುದಾಯ ಶಿಕ್ಷಕರ ಹಾಗೂ ಮರಿತಿಬ್ಬೇಗೌಡ ಆಪ್ತಬಳಗದಲ್ಲಿರುವ ಕೆಲವರಿಗೆ ಅತೃಪ್ತಿ ತರಿಸಿದೆ. ಇನ್ನು ಕಾಂಗ್ರೆಸ್ ನಾಯಕರು ಪರಿಣಾಮಕಾರಿಯಾಗಿ ಚುನಾವಣಾ ಪ್ರಚಾರ ಮಾಡಿಲ್ಲ ಎನ್ನುವುದು ಬಹಿರಂಗ ಸತ್ಯ. ಇದಲ್ಲದೆ ಮರಿತಿಬ್ಬೇಗೌಡ ಅವರನ್ನು ಹಲವು ವರ್ಷದಿಂದ ಬೆಂಬಲಿಸಿಕೊಂಡು ಬಂದಿರುವ ಶಿಕ್ಷಕರ ಪೈಕಿ ಬಹುತೇಕರು ನಿವೃತ್ತಿಯಾಗಿದ್ದಾರೆ. ಜತೆಗೆ ಸಂವಹನದ ವಿಷಯದಲ್ಲಿ ಗೌಡರು ಹಿಂದೆ ಬಿದ್ದಿರುವ ಬೇಸರ ಶಿಕ್ಷಕ ವಲಯದಲ್ಲಿದೆ. ಇದು ಅವರಿಗೆ ದೊಡ್ಡಮಟ್ಟದ ಮೈನಸ್ ಆಗಿದೆ.
ಈ ನಡುವೆ ಮರಿತಿಬ್ಬೇಗೌಡರ ಬಗ್ಗೆ ಶಿಕ್ಷಕ ವಲಯದಲ್ಲಿ ಒಳ್ಳೆಯ ಹೆಸರಿದೆ. ಯಾವುದೇ ಸಮಸ್ಯೆ ಅಥವಾ ಕೆಲಸವಾದರೂ ಅಚ್ಚುಕಟ್ಟಾಗಿ ಮಾಡಿಕೊಡುವುದು ಫ್ಲಸ್ ಅಂಶವಾಗಿದೆ. ಅಂತೆಯೇ ಈ ಬಾರಿ ಚುನಾಯಿತರಾದರೆ ಸಭಾಪತಿಯಾಗುವ ಅವಕಾಶ ಇದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಶಿಕ್ಷಕ ವಲಯ ಬೆಂಬಲಿಸಿದೆ ಎನ್ನುವ ನಂಬಿಕೆ ಕಾಂಗ್ರೆಸ್‌ಗಿದೆ.
ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ
ಸವಾಲು ಗೆಲ್ಲುವ ವಿಶ್ವಾಸದಲ್ಲಿ ಎನ್‌ಡಿಎ
ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ಕೆ.ವಿವೇಕಾನಂದ ಅಖಾಡದಲ್ಲಿ ಜೋರಾಗಿಯೇ ಸದ್ದು ಮಾಡಿದ್ದಾರೆ. ಮದ್ದೂರು ತಾಲೂಕು ಅವ್ವೇರಹಳ್ಳಿ ಗ್ರಾಮದ ಇವರು, ಮೈಸೂರಿನಲ್ಲಿ ರಾಜಕೀಯ ಬದುಕು ಕಟ್ಟಿಕೊಂಡಿದ್ದಾರೆ.
ಹಾಲಿ ಜೆಡಿಎಸ್ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ದಳಪತಿಗಳು ತಂತ್ರಗಾರಿಕೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಬಂಡಾಯವೇಳುವ ಸೂಚನೆ ಮುನ್ನವೇ ಮಾಜಿ ಎಂಎಲ್‌ಸಿಯೂ ಆದ ಸ್ಪರ್ಧಾಕಾಂಕ್ಷಿಯಾಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರನ್ನು ಸಮಾಧಾನಪಡಿಸಲಾಗಿತ್ತು.
ಇದಲ್ಲದೆ ಹೆಸರು ಘೋಷಣೆಯಾಗಿ ನಾಮಪತ್ರವನ್ನು ಸಲ್ಲಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅವರ ಮನವೊಲಿಕೆಯೂ ಆಯಿತು. ಆದರೆ ಇದು ಅಷ್ಟೊಂದು ಯಶಸ್ವಿಯಾಗಿಲ್ಲ ಎನ್ನುವ ಮಾತಿದೆ. ಆದ್ದರಿಂದ ಮೇಲ್ನೋಟಕ್ಕೆ ಎಲ್ಲವೂ ಸರಿ ಇರುವಂತೆ ಕಂಡರೂ ಬಂಡಾಯದ ಒಳೇಟಿನ ಭೀತಿ ಇದೆ. ಈ ನಡುವೆ ಬಿಜೆಪಿಯ ಬೆಂಬಲ ವಿವೇಕಾನಂದಗೆ ಸಿಕ್ಕಿದೆ. ಮರಿತಿಬ್ಬೇಗೌಡ ಅವರ ವಿರೋಧಿ ಬಣ ಮೈತ್ರಿ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿದ್ದಾರೆ.
ಕಾಂಗ್ರೆಸ್ ನಿದ್ದೆಗೆಡಿಸಿದ ಸಂಸತ್ ಫಲಿತಾಂಶ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎನ್ನುವ ಅತೀವ ವಿಶ್ವಾಸ ಹೊಂದಿದ್ದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಲೋಕಸಭಾ ಚುನಾವಣೆಯ ಫಲಿತಾಂಶ ನಿದ್ದೆಗೆಡಿಸಿದೆ. ಗ್ಯಾರಂಟಿ ಯೋಜನೆಗಳ ನಡುವೆಯೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪರಿಣಾಮ ಕಾಂಗ್ರೆಸ್‌ನ ಲೆಕ್ಕಾಚಾರವೆಲ್ಲವೂ ಉಲ್ಟಾ ಆಗಿದೆ. ಈ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯ ಫಲಿತಾಂಶ ಏನಾಗಲಿದೆ ಎನ್ನುವ ಆತಂಕ ಕಾಡುತ್ತಿದೆ.
ಚಿಂತಕರ ಛಾವಡಿ ಎನ್ನಿಸಿಕೊಂಡಿರುವ ಪರಿಷತ್ ಚುನಾವಣೆಯ ಅಖಾಡದಲ್ಲಿಯೂ ಕಾಂಚಾಣದ ಸದ್ದು ಜೋರಾಗಿ ನಡೆದಿದೆ. ತೀವ್ರ ಪೈಪೋಟಿ ಎದುರಾಗಿರುವ ಹಿನ್ನೆಲೆಯಲ್ಲಿ ಹಣದ ಹೊಳೆ ಹರಿಸಲಾಗಿದೆ ಎನ್ನಲಾಗುತ್ತಿದೆ. ಪೈಪೋಟಿಗೆ ಬಿದ್ದವರಂತೆ ಪ್ರತಿ ಮತಕ್ಕೆ ಇಂತಿಷ್ಟೆಂದು ಹಣ ನೀಡಲಾಗಿದೆ. ಜತೆಗೆ ಗಿಫ್ಟ್ ಗಳ ಭರಾಟೆಯೂ ನಡೆದಿದೆ ಎಂದು ಹೇಳಲಾಗುತ್ತಿದೆ. ಬೇರೆ ಚುನಾವಣೆಗಳಂತೆ ಇಲ್ಲಿಯೂ ಅದರಲ್ಲಿ ಈ ಬಾರಿ ಜಾತಿ ಲೆಕ್ಕಾಚಾರ ನಡೆದಿದೆ. ಅದರಂತೆ ನಿರ್ದಿಷ್ಟ ಸಮುದಾಯದ ಬೆಂಬಲ ತಮಗಿದೆ ಎನ್ನುವ ವಿಶ್ವಾಸವನ್ನು ಅಭ್ಯರ್ಥಿಗಳು ಹೊಂದಿದ್ದಾರೆ.