ಜಿಲ್ಲೆ

ನ.11ರಂದು ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯಿಂದ ಅನಿರ್ದಿಷ್ಟಾವಧಿ ಧರಣಿ

Mangaluru - Hariprasad Rai



ಮಂಗಳೂರು : ಬೆಳ್ತಂಗಡಿ ತಾಲೂಕಿನ ಸೌತಡ್ಕದ ಶ್ರೀ ಮಹಾಗಣಪತಿ ದೇವಾಲಯದ ಉಪಯೋಗಕ್ಕಾಗಿ ಈ ಹಿಂದೆ ಭಕ್ತರ ದೇಣಿಗೆಯಿಂದ
ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಅಕ್ರಮವಾಗಿ ಖಾಸಗಿ ಟ್ರಸ್ಟ್‌ಗಳಿಗೆ ಹಸ್ತಾಂತರ ಮಾಡಲಾಗಿದೆ. ಈ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸಿ ದೇವಾಲಯದ ಅಸ್ತಿಯನ್ನು ಉಳಿಸುವಂತೆ ಆಗ್ರಹಿಸಿ ಶ್ರೀಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ವತಿಯಿಂದ ದೇವಾಲಯದ ಎದುರು ನ.11ರಂದು ಬೆಳಗ್ಗೆ 9ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಂರಕ್ಷಣಾ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇವಾಲಯಕ್ಕಾಗಿ 2004ರಲ್ಲಿ ಭಕ್ತರ ದೇಣಿಗೆ ಹಣದಿಂದ 3.46 ಎಕರೆ ಜಾಗ ಖರೀದಿಸಲಾಗಿತ್ತು. ಅದರಲ್ಲಿ ದೇವಾಲಯದ ಸ್ವಂತ ಖರ್ಚಿನಿಂದಲೇ ವಾಣಿಜ್ಯ ಕಟ್ಟಡ, ವಸತಿ ಗೃಹ ನಿರ್ಮಾಣವಾಗಿದೆ. ಈಗ ಅದರ ಆದಾಯ ಹಾಗೂ ಭೂಮಿ ದೇವಾಲಯಕ್ಕೆ ಸಿಗದೆ ಖಾಸಗಿ ಟ್ರಸ್ಟ್‌ಗೆ ಸಂದಾಯವಾಗುತ್ತಿದೆ. ದೇವಾಲಯ ಮುಜರಾಯಿ ಇಲಾಖೆ ಅಧೀನದಲ್ಲಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಈ ಆಸ್ತಿ ದೇವಾಲಯಕ್ಕೆ ಸೇರುವಂತೆ ಮಾಡಬೇಕು ಎಂದು ಅವರು ಹೇಳಿದರು.
ಮಹಾಗಣಪತಿ ಬಯಲು ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ 2004ರಲ್ಲಿ ದೇವಾಲಯ ಆಡಳಿತ ಮಂಡಳಿ ಸಭೆ ನಡೆಸಿ ಸಮೀಪದ ಲಭ್ಯ ಜಮೀನನ್ನು ದೇವಾಲಯಕ್ಕಾಗಿ ಖರೀದಿಸುವ ತೀರ್ಮಾನ ಮಾಡಿತ್ತು. ದೇವಾಲಯದ ಖಜಾನೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಆಗಿನ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ವಾಸುದೇವ ಶಬರಾಯ, ಸದಸ್ಯರಾದ ರಾಘವ ಕೆ. ಮತ್ತು ವಿಶ್ವನಾಥ ಕೆ. ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ ಭೂಮಿ ನೋಂದಣಿ ಮಾಡಲಾಯಿತು. ದೇವಾಲಯಕ್ಕೆ ಸಂಬಂಧಿಸಿದ ಸ್ಥಿರಾಸ್ತಿಯನ್ನು ಖಾಸಗಿ ವ್ಯಕ್ತಿಗಳ ಹೆಸರಲ್ಲಿ ನೋಂದಣಿ ಮಾಡಿದ್ದನ್ನು ಭಕ್ತರು ಪ್ರಶ್ನಿಸಿದ ಬಳಿಕ, 2006ರಲ್ಲಿ ಈ ಮೂವರು ದೇವಾಲಯ ಹೆಸರಿನಲ್ಲಿ ದಾನಪತ್ರ ಮಾಡಲು ಮುಂದಾದಾಗ, ಕೃಷಿ ಭೂಮಿಯನ್ನು ದೇವಾಲಯ ಹೆಸರಲ್ಲಿ ನೋಂದಣಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬ ವಿಚಾರ ಗೊತ್ತಾಯಿತು. ಆ ಸಂದರ್ಭ ಆಗಿನ ದೇವಾಲಯ ಆಡಳಿತ ಸಮಿತಿಯವರು ಸೇರಿಕೊಂಡು ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ರಚನೆ ಮಾಡಿದ್ದರು. ಖರೀದಿ ಮಾಡಿದ ಜಾಗದಲ್ಲಿ ದೇವಾಲಯದ ಸ್ವಂತ ಖರ್ಚಿನಿಂದ ವಸತಿ ಗೃಹ, ವಾಣಿಜ್ಯ ಕಟ್ಟಡ, ರಬ್ಬರ್ ಕೃಷಿ ಮಾಡಲಾಗಿದ್ದು, ಅಂದಿನಿಂದ ಇದರ ಆದಾಯ ದೇವಾಲಯಕ್ಕೆ ಬರದೆ ಖಾಸಗಿ ಟ್ರಸ್ಟ್‌ಗೆ ಸಂದಾಯವಾಗುತ್ತಿದೆ ಎಂದು ಸುಬ್ರಹ್ಮಣ್ಯ ಶಬರಾಯ ತಿಳಿಸಿದರು.
ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಪ್ರಶಾಂತ್ ರೈ, ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್ ಪಟ್ರಮೆ, ಖಜಾಂಚಿ ವಿಶ್ವನಾಥ ಕೊಲ್ಲಾಜೆ, ಶ್ರೀವತ್ಸ ಉಪಸ್ಥಿತರಿದ್ದರು.