ಜಿಲ್ಲೆ

ಸೌಂಡ್‌ಲೆಸ್ ಎರ್‌ಪೋರ್ಟ್!, ಲೌಡ್‌ಸ್ಪೀಕರ್ ಘೋಷಣೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತಿಶ್ರೀ

ಶ್ರವಣ್‌ಕುಮಾರ್ ನಾಳ, ಮಂಗಳೂರು

ಪ್ರತೀ ದಿನ 40ಕ್ಕೂ ಅಧಿಕ ವಿಮಾನಗಳ ಹಾರಾಟ ನಡೆಸುವ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾದ ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ಥುತ ಸೌಂಡ್‌ಲೆಸ್ ಎರ್‌ಪೋರ್ಟ್......!

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೆ ಪ್ರಯಾಣಿಕರ ಮಾಹಿತಿಗಾಗಿ ಸುಮಾರು 25ಕ್ಕೂ ಅಧಿಕ ಲೌಡ್ ಸ್ಪೀಕರ್‌ಗಳಲ್ಲಿ ಹೊರಡಿಸಲಾಗುತ್ತಿದ್ದ ಘೋಷಣೆಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಲಾಗಿದೆ. ಅದರ ಬದಲು ಕೇವಲ ಎಲೆಕ್ಟ್ರಾನಿಕ್ಸ್ ಡಿಸ್‌ಪ್ಲೇಗಳಲ್ಲಿ ಮಾತ್ರ ಮಾಹಿತಿ ತಿಳಿಸಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಲೌಡ್‌ಸ್ಪೀಕರ್ ಘೋಷಣೆಗಳಿಂದ ಪ್ರಯಾಣಿಕರಿಗೆ ಇದರಿಂದ ಕಿರಿಕಿರಿಯಾಗುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಆಡಳಿತ ಈ ಉಪಕ್ರಮಕ್ಕೆ ಮುಂದಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಯೋಜನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

*ಮೇ ಐ ಹೆಲ್ಸ್ ಯು ಡೆಸ್ಕ್ ಸ್ಥಾಪನೆ

ಇನ್ನುಮುಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಆಗಮನ, ನಿರ್ಗಮನ, ವಿಳಂಬ ಸಹಿತ ವಿವಿಧ ಮಾಹಿತಿಯನ್ನು ಪ್ರಯಾಣಿಕರಿಗೆ ಏರ್ ಪೋರ್ಟ್‌ನಲ್ಲಿರುವ ಫ್ಲೈಟ್ ಇನ್ಫಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ ಮೂಲಕ ಪಡೆಯಬಹುದು. ಸಾರ್ವಜನಿಕರ ಮಾಹಿತಿಗಾಗಿ ವಿಮಾನ ನಿಲ್ದಾಣದ ಒಳಭಾಗ ಮತ್ತು ಹೊರಭಾಗಗಳಲ್ಲಿ ದೊಡ್ಡ ಡಿಸ್ ಪ್ಲೇಯನ್ನು ಇರಿಸಲಾಗಿದೆ. ಪ್ರಯಾಣಿಕರ ಉಪಯೋಗ ಹಾಗೂ ವಿಮಾನ ಪ್ರಯಾಣ ಮಾಹಿತಿಗಾಗಿ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಮೇ ಐ ಹೆಲ್ಸ್ ಯು ಡೆಸ್ಕ್ ಸ್ಥಾಪಿಸಲಾಗಿದ್ದು, ಅಲ್ಲಿ ಸಿಬ್ಬಂದಿ, ಕಾರ್ಯನಿರ್ವಾಹಕರು ಸಹಾಯಕ್ಕೆ ಇರಲಿದ್ದಾರೆ. ಎಲ್ಲ ಏರ್‌ಲೈನ್ಸ್ ಚೆಕ್- ಇನ್ ಕೌಂಟರ್‌ಗಳು, ಬೋಡಿರ್ಂಗ್ ಗೇಟ್‌ಗಳಲ್ಲಿಯೂ ವಿಮಾನದ ಮಾಹಿತಿ ಪಡೆಯಲು ಸಾಧ್ಯವಿದೆ.

-------------------

ಪ್ರಯಾಣಿಕರಿಗೆ ಎಸ್‌ಎಂಎಸ್ ಸಂದೇಶ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಡೆರಹಿತ ಪ್ರಯಾಣದ ಮಾಹಿತಿಗೆ ಸಹಾಯ, ಬೋಡಿರ್ಂಗ್, ಗೇಟ್ ಬದಲಾವಣೆ, ವಿಮಾನದ ಮರು ವೇಳಾಪಟ್ಟಿ ಮುಂತಾದ ವಿಷಯಗಳು ಏರ್‌ಲೈನ್‌ನಿಂದ ಪ್ರಯಾಣಿಕರ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ಇ-ಮೈಲ್ ಸಂದೇಶ ಬರಲಿದೆ. ಈಗಾಗಲೇ ತನ್ನ ಉದ್ಯೋಗಿಗಳಿಗೆ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳುವ ವಿಮಾನ ನಿಲ್ದಾಣಕ್ಕೆ ಅಪೆಕ್ಸ್ ಇಂಡಿಯಾ ಫೌಂಡೇಶನ್ ನೀಡುವ 8ನೇ ಅಪೆಕ್ಸ್ ಇಂಡಿಯಾ ಒಕ್ಯುಪೇಶನಲ್ ಹೆಲ್ತ್ ಆ್ಯಂಡ್ ಸೇಫ್ಟಿ ಅವಾರ್ಡ್ ಪ್ಲಾಟಿನಂ ಪ್ರಶಸ್ತಿ ಪಡೆದುಕೊಂಡಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೃಢವಾದ ಸುರಕ್ಷತಾ ಕ್ರಮಗಳನ್ನು ನಿರಂತರ ಜಾರಿಗೆ ತಂದಿದೆ. ತರಬೇತಿ ಕಾರ್ಯಕ್ರಮಗಳು ಮತ್ತು ನಿರಂತರ ಸುಧಾರಣೆಯ ಉಪಕ್ರಮಗಳನ್ನು ಸಹ ಪ್ರಾರಂಭಿಸಿದೆ. ಇದು ಭಾರತದಲ್ಲಿ ಸುರಕ್ಷಿತವಾದ ಟೇಬಲ್ ಟಾಪ್ ವಿಮಾನ ನಿಲ್ದಾಣವನ್ನು ಮಾಡುವ ‘ವಿಷನ್ 2025ಕ್ಕೆ ಅನುಗುಣವಾಗಿದೆ.

--------------------

ಹೊಸ ಇಂಟಿಗ್ರೇಟೆಡ್ ಟರ್ಮಿನಲ್

ಈಗಾಗಲೇ ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಎರಡು ಹೆಚ್ಚುವರಿ ಪ್ರಯಾಣಿಕರ ಬೋರ್ಡಿಂಗ್ ಬ್ರಿಡ್ಜ್‌ಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಇದರೊಂದಿಗೆ ವಿಮಾನ ನಿಲ್ದಾಣದಲ್ಲಿ ಏರೋ ಬ್ರಿಡ್ಜ್ ಗಳ ಸಂಖ್ಯೆ ಆರಕ್ಕೆ ಏರಿದೆ. ವಿಶೇಷವಾಗಿ ಮಳೆಗಾಲದಲ್ಲಿ ಪ್ರಯಾಣಿಕರನ್ನು ಏಪ್ರನ್‌ನಲ್ಲಿರುವ ವಿಮಾನದಿಂದ ಟರ್ಮಿನಲ್‌ಗೆ ಮತ್ತು ತೆರೆದ ಬೇ ಇಂದ ಸ್ಥಳಾಂತರಿಸುವುದು ಒಂದು ಸವಾಲಾಗಿರುತ್ತದೆ. ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡಕ್ಕೆ ಜೋಡಿಸಲಾದ ಈ ಏರೋಬ್ರಿಡ್ಜ್ ಗಳು ವಿಮಾನ ನಿಲ್ದಾಣಕ್ಕೆ ಏಪ್ರನ್‌ನಲ್ಲಿ ಲಭ್ಯವಿರುವ 11 ಪಾರ್ಕಿಂಗ್ ಸ್ಟಾೃಂಡ್‌ಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಆರು ಸ್ಟಾೃಂಡ್‌ಗಳು ಟರ್ಮಿನಲ್‌ಗೆ ಏರೋಬ್ರಿಡ್ಜ್ ಜತೆ ಸಂಪರ್ಕ ಹೊಂದಿವೆ. ಉಳಿದವು ತೆರೆದ ಬೇ ಗಳಾಗಿವೆ ಈ ಎಲ್ಲಾ ಮಾಹಿತಿಗಳನ್ನು ಏರ್ ಪೋರ್ಟ್‌ನಲ್ಲಿರುವ ಫ್ಲೈಟ್ ಇನ್ಫಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ ಮೂಲಕ ಪಡೆಯಬಹುದು ಎಂದು ವಿಮಾನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.