ಜಿಲ್ಲೆ

ಕೌಶಲ ವೃದ್ಧಿಗೆ ತರಬೇತಿ: ಡಾ. ಸುಬ್ರಹಣ್ಯ ಭಟ್

Udupi

ಬೈಂದೂರು: ವೃತ್ತಿಗೆ ಅನುಗುಣವಾಗಿ ಸಂಘಟನೆಗಳ ಸದಸ್ಯರ ವೃತ್ತಿ ಕೌಶಲ ಹೆಚ್ಚಿಸಲು ತರಬೇತಿ ಹಾಗೂ ಮಾರ್ಗದರ್ಶನ ಅಗತ್ಯ ಎಂದು ರಾಜ್ಯ ವೈದ್ಯ ಸಂಘ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಸುಬ್ರಹಣ್ಯ ಭಟ್ ಹೇಳಿದರು.

ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಭಾನುವಾರ ಬೈಂದೂರು ವಲಯದ ಧ್ವನಿ ಮತ್ತು ಬೆಳಕು ಸಂಯೋಜಕರ ಸಂಘಟನೆಯ ದಶಮಾನೋತ್ಸವ ಸಮಾರಂಭ ಹಾಗೂ 11ನೇ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಧ್ವನಿ-ಬೆಳಕು ವೃತ್ತಿ ನಿರತರು ಅಪಾಯದ ನಡುವೆ ಕೆಲಸ ಮಾಡಬೇಕು .ಯಾವುದೇ ಕಾರ್ಯಕ್ರಮದ ಯಶಸ್ಸಿನ ಹಿಂದೆ ಈ ಸಂಘಟನೆ ಕೆಲಸ ಮಾಡುತ್ತದೆ. ಧ್ವನಿ ಇಲ್ಲದವರ ಧ್ವನಿಯಾಗುವ ಹಾಗೂ ವೇದಿಕೆಯಲ್ಲಿರುವವರ ಧ್ವನಿಯನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.

ಬೈಂದೂರು ವಲಯಾಧ್ಯಕ್ಷ ಶಶಿಧರ ಶೆಣೈ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು. ವಲಯದ ಹತ್ತು ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಿವರಾಜ್ ಮಲ್ಗಾರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕಾರ್ಯದರ್ಶಿ ಯು. ವಿನಾಯಕ ಪ್ರಭು ವರದಿ ಹಾಗೂ ಖಜಾಂಚಿ ಪ್ರಭಾಕರ ಜಿ. ದೇವಾಡಿಗ ಲೆಕ್ಕಪತ್ರ ಮಂಡಿಸಿದರು. ಜಿಲ್ಲೆ ಹಾಗೂ ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘಟನೆ ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್ ಪ್ರಾಸ್ತಾವಿಸಿದರು. ಗಣೇಶ್ ಎಂ. ಪೂಜಾರಿ ಸ್ವಾಗತಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಹರೇಗೋಡು ಉದಯ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಧ್ವನಿ ಮತ್ತು ಬೆಳಕು ಸಂಘಟನೆಯ ಸದಸ್ಯರು ಬುದ್ಧಿವಂತರು.ಇಂತಹ ಕ್ಷೇತ್ರವನ್ನು ಅಯ್ಕೆ ಮಾಡಿಕೊಳ್ಳುವವರಲ್ಲಿ ಕಲಾವಿದರಾಗುವಂತಹ ಹೃದಯವಂತಿಕೆ ಬೇಕು. ಈ ಸಂಘಟನೆಯ ಹೆಚ್ಚಿನ ಸದಸ್ಯರಲ್ಲಿ ಕಲಾವಂತಿಕೆ ಇರುವುದರಿಂದ ಇದೊಂದು ಪ್ರತಿಭಾವಂತರ ಸಂಘಟನೆ.

ಡಾ. ಸುಬ್ರಹ್ಮಣ್ಯ ಭಟ್, ರಾಜ್ಯ ವೈದ್ಯ ಸಂಘ ಪರಿಷತ್ತಿನ ಜಿಲ್ಲಾಧ್ಯಕ್ಷ