ಜಿಲ್ಲೆ

ಮತಿಯಂತೆ ಗತಿ, ಸನ್ಮತಿಯಿಂದ ಸದ್ಗತಿ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿಕೆ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ದೇಹಕ್ಕೆ ಮಾತ್ರ ಸಾವು, ಆತ್ಮಕ್ಕೆ ಸಾವಿಲ್ಲ. ಆತ್ಮ ಶಾಶ್ವತ. ಮತಿಯಂತೆ ಗತಿ ಇರುತ್ತದೆ. ಸನ್ಮತಿಯಿಂದ ಸದ್ಗತಿ ಪ್ರಾಪ್ತವಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ನಿಧನರಾದ ನಿವೃತ್ತ ಉಪನ್ಯಾಸಕ, ವೇಣೂರು ಮಾರಗುತ್ತು ಎಂ.ವಿಜಯರಾಜ ಅಧಿಕಾರಿ ಸ್ಮರಣಾರ್ಥ ಭಾನುವಾರ ವೇಣೂರಿನಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ನಡೆದ ವಿಶೇಷ ಪೂಜೆ, ಅಭಿಷೇಕದ ಬಳಿಕ ಮಂಗಲಪ್ರವಚನ ನೀಡಿ ಮನುಷ್ಯ ಜನ್ಮದಲ್ಲೇ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿ ಮಾಡಲು ಸಾಧ್ಯವಾಗುತ್ತದೆ. ದಿವಂಗತ ಮಾರಗುತ್ತು ವಿಜಯರಾಜ ಅಧಿಕಾರಿ ಆದರ್ಶ ಉಪನ್ಯಾಸಕರಾಗಿ, ಉತ್ತಮ ಶ್ರಾವಕರಾಗಿ, ವಾಗ್ಮಿಯಾಗಿ, ಜೈನ ಧರ್ಮದ ಬಗ್ಯೆ ಆಳವಾದ ಅಧ್ಯಯನ ಮಾಡಿದ್ದರು. ಮಾರಗುತ್ತಿನ ಸಂಪ್ರದಾಯ, ಶಿಷ್ಟಾಚಾರಗಳ ಪಾಲನೆಯೊಂದಿಗೆ, ಜೈನ್‌ಮಿಲನ್, ವಿವೇಕ ಬಳಗ, ರೋಟರಿ ಕ್ಲಬ್ ಮೊದಲಾದ ಸೇವಾ ಸಂಸ್ಥೆಗಳಲ್ಲಿಯೂ ಉತ್ತಮ ಸೇವೆ ನೀಡಿದ್ದಾರೆ ಎಂದರು.

ಒಂಬತ್ತು ಬಾರಿ ಸಾಮೂಹಿಕ ಪಂಚನಮಸ್ಕಾರ ಮಂತ್ರಪಠಣದೊಂದಿಗೆ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಜೈನಧರ್ಮದ ಸಂಪ್ರದಾಯದಂತೆ ವಿಜಯದರ್ಪಣ ಎಂಬ ಕೃತಿಯನ್ನು ಶಾಸ್ತ್ರದಾನವಾಗಿ ವಿತರಿಸಲಾಯಿತು. ಬಸದಿಯಲ್ಲಿ 504 ಕಲಶ ಅಭಿಷೇಕ, ಉತ್ಸವ, ಪಂಚಾಮೃತ ಅಭಿಷೇಕ, ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನಡೆಯಿತು.

ಧರ್ಮಸ್ಥಳದ ಡಿ.ಹಷೇರ್ಂದ್ರ ಕುಮಾರ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯರ್ ಶಿವಪ್ರಸಾದ ಅಜಿಲ, ಅಳದಂಗಡಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ, ಎಸ್.ಡಿ. ಸಂಪತ್‌ಸಾಮ್ರಾಜ್ಯ ಶಿರ್ತಾಡಿ, ಕೃಷ್ಣರಾಜ ಹೆಗ್ಡೆ ಮೂಡುಬಿದಿರೆ, ಕಾರ್ಕಳದ ಹಿರಿಯ ವಕೀಲ ಎಂ.ಕೆ.ವಿಜಯ ಕುಮಾರ್, ಎಂ.ಕೆ.ಸುವೃತ ಕುಮಾರ್, ಮಂಗಳೂರಿನ ಎಂ.ಆರ್.ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.