ಕಾರವಾರ: ಇಲ್ಲಿನ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ 40.70 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಸಂತೋಷಕುಮಾರ್ ಎಂ.ಜೆ. ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದಾಶಿವಗಡ ತಾರಿವಾಡದ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲಿಂಗರಾಜ ಪುತ್ತು ಕಲ್ಗುಟಕರ್ ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿ ಸೇರಿ ಇತರ 30 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಸಹಕಾರಿಯ ಹಾಲಿ ನಿರ್ದೇಶಕರು, ಮಾಜಿ ನಿರ್ದೇಶಕರು, ಪದಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಾಹಕರು ಸೇರಿಕೊಂಡು ಸಹಕಾರಿಯಲ್ಲಿ 40.70 ಕೋಟಿ ರೂ. ಹಣವನ್ನು ಅಪ್ರಾಮಾಣಿಕವಾಗಿ ದುರುಪಯೋಗಪಡಿಸಿಕೊಂಡು ಸಹಕಾರಿಯ ಠೇವಣಿದಾರರಿಗೆ ಸಕಾಲದಲ್ಲಿ ಸಕಾಲದಲ್ಲಿ ಹಣವನ್ನು ಮರುಪಾವತಿ ಮಾಡದೇ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತನಿಖೆ:
ಸೌಹಾರ್ದ ಸಹಕಾರಿಯ ಗ್ರಾಹಕರು ಇಲ್ಲಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಸೌಹಾರ್ದ ಸಂಯುಕ್ತ ಸಹಕಾರಿಯ ವಿಭಾಗೀಯ ಅಧಿಕಾರಿ ಬಸವರಾಜ್ ಹಾಗೂ ಶಿರಸಿಯ ಅಭಿವೃದ್ಧಿ ಅಽಕಾರಿ ಸಂತೋಷ ಕುಮಾರ್ ಅವರು ತನಿಖೆ ಕೈಗೊಂಡಿದ್ದರು.
2020-21 ನೇ ಸಾಲಿನಿಂದ ಜೂನ್ 2025 ರವರೆಗೆ ಅಡಾವೆ ಪತ್ರಿಕೆಯ ಪರೀಕ್ಷೆ ನಡೆಸಿದ್ದರು. ಒಟ್ಟು 12 ಶಾಖೆಗಳಲ್ಲಿ 6003 ಸದಸ್ಯರಿದ್ದಾರೆ ಎಂದು ತೋರಿಸಲಾಗಿದೆ. ಆದರೆ, ಹಲವು ಸದಸ್ಯರ ಹೆಸರು ಹಾಗೂ ಠೇವಣಿಗಳನ್ನೂ ಫೇಕ್ ಆಗಿ ತೋರಿಸಿರುವುದು ಕಂಡುಬAದಿದೆ. ಮಾತ್ರವಲ್ಲಿ ನಕಲಿ ಸಾಲವನ್ನು ಸೃಷ್ಟಿ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಿಸ್ತ್ರತ ತನಿಖೆಗಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಸಿಐಡಿಗೆ ಹಸ್ತಾಂತರ 2 ಕೋಟಿಗಿಂತ ಹೆಚ್ಚಿನ ಮೌಲ್ಯದ ಆರ್ಥಿಕ ಅಪರಾಧಗಳನ್ನು ಸಿಐಡಿ ತನಿಖೆ ನಡೆಸಬೇಕು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗುವುದು ಎಂದು ಕಾರವಾರ ಡಿವೈಎಸ್‌ಪಿ ಗಿರೀಶ ಎಸ್.ವಿ.ತಿಳಿಸಿದ್ದಾರೆ. ಈ ಬಗ್ಗೆ ಪತ್ರ ಬರೆದು ಪ್ರಕ್ರಿಯೆ ಆರಂಭಿಸಿ, ನಂತರ ದಾಖಲೆ ಹಸ್ತಾಂತರಿಸುವುದಾಗಿ ಅವರು ವಿವರಿಸಿದ್ದಾರೆ.