ಜಿಲ್ಲೆ

ಸಾಗರದ ಸಮಗ್ರ ಅಭಿವೃದ್ಧಿ

ಸಾಗರ: ಕರೊನಾ ಸಂಕಷ್ಟದಿಂದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಆದರೂ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಉಳಿದಿರುವ ಎರಡೂವರೆ ವರ್ಷದ ಅವಧಿಯಲ್ಲಿ ಮೂಲ ಸೌಕರ್ಯಕ್ಕೆ, ಸರ್ವತೋಮುಖ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಸಾಗರ ನಗರಸಭೆಯಿಂದ ಸೋಮವಾರ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೊರಬ ರಸ್ತೆ ಅಗಲೀಕರಣಕ್ಕೆ 60 ಕೋಟಿ ರೂ. ಬೇಡಿಕೆ ಇರಿಸಿದ್ದು ತಕ್ಷಣಕ್ಕೆ ಮೊದಲ ಹಂತದಲ್ಲಿ 30 ಕೋಟಿ ರೂ., ಎರಡನೇ ಹಂತದಲ್ಲಿ ಮತ್ತೆ 30 ಕೋಟಿ ರೂ. ಬಿಡುಗಡೆ ಮಾಡಲಿದ್ದು, ಸಾಗರ ಸಮಗ್ರ ಅಭಿವೃದ್ಧಿಗೆ ಅನá-ದಾನ ನೀಡಲಾಗá-ವುದು ಎಂದರು.

ಸಾಗರ ಮತ್ತು ಹೊಸನಗರ ಭಾಗಕ್ಕೆ ಶರಾವತಿ ಹಿನ್ನೀರಿನಿಂದ ನೀರು ಪೂರೈಕೆ ಮಾಡುವ ಸಮಗ್ರ ಕುಡಿಯುವ ನೀರಿನ ಯೋಜನೆಗೆ ವಿಸ್ತತ ಯೋಜನಾ ವರದಿ ತಯಾರಿಸಲು ಆದೇಶ ಮಾಡಲಾಗಿದೆ. ಕಾರ್ಗಲ್​ನಿಂದ ಶರಾವತಿ ಹಿನ್ನೀರನ್ನು ಸಾಗರಕ್ಕೆ ತರುವ ಮಾರ್ಗ ಮಧ್ಯದಲ್ಲಿ ಬರುವ 28 ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ನಗರಸಭೆ ವ್ಯಾಪ್ತಿಯಲ್ಲಿ ಸೂರಿಲ್ಲದ ಬಡವರ ಪಟ್ಟಿ ಕೊಡಿ. ಅಂತಹವರಿಗೆ ಸರ್ಕಾರದಿಂದ ತಕ್ಷಣ ಮನೆ ಮಂಜೂರು ಮಾಡಲಾಗುತ್ತದೆ. ಇದರ ಜತೆಗೆ 332 ಪ್ರಕರಣಕ್ಕೂ ಅನುಮೋದನೆ ನೀಡಲಾಗುತ್ತದೆ. ಬಡವರು ಸೂರಿಲ್ಲದೆ ಇರಬಾರದು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ವಿಶ್ವವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿಗೆ 120 ಕೋಟಿ ರೂ. ಹಣ ಮಂಜೂರಾಗಿದೆ. ಜೋಗ ಜಲಪಾತ ಸಮಗ್ರ ಅಭಿವೃದ್ಧಿಯಿಂದ ಹೆಚ್ಚಿನ ಪ್ರವಾಸಿಗರು ವೀಕ್ಷಣೆಗೆ ಬರುತ್ತಾರೆ. ಇದರಿಂದ ಸಾಗರಕ್ಕೆ ಮತ್ತಷ್ಟು ಆರ್ಥಿಕ ಶಕ್ತಿ ಬರುತ್ತದೆ. ಐತಿಹಾಸಿಕ ತುಮರಿ ಸೇತುವೆ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ತುಮರಿ ಸೇತುವೆ ಕಲ್ಪನೆಗೂ ಮೀರಿ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಹೇಳಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಚನಾ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್ ಇತರರಿದ್ದರು.