ಸೊರಬದಲ್ಲಿ ಲೋಕಾಯುಕ್ತ ಪೊಲೀಸ್ ಏರ್ಪಡಿಸಿದ್ದ ಕುಂದು ಕೊರತೆ ಸಭೆಯಲ್ಲಿ ರೈತರೊಬ್ಬರು ಅಳಲು ತೋಡಿಕೊಂಡರು.  
ಜಿಲ್ಲೆ

ಸೊರಬ: ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು-ಅಧಿಕಾರಿಗಳ ನಡುವೆ ವಾಗ್ವಾದ

ಸೊರಬ: ಅಕ್ರಮವಾಗಿ ಖಾತೆ ಬದಲಾವಣೆ, ಪೋಡಿ ದುರಸ್ತಿಯಲ್ಲಿ ವಿಳಂಬ, ಹಳೇ ತಾಲೂಕು ಕಚೇರಿ ಆವರಣದಲ್ಲಿದ್ದ ನಾಟಾ ಅಕ್ರಮ ಸಾಗಣೆ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದು ಸೇರಿದಂತೆ ಸಾಕಷ್ಟು ದೂರುಗಳು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಲೋಕಾಯುಕ್ತ ಪೊಲೀಸ್ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಕೇಳಿಬಂದವು.

ತಾಲೂಕಿನ ಕಾತುವಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕವಳ್ಳಿ ಗ್ರಾಮದಲ್ಲಿರುವ ನಿವೇಶನವನ್ನು ಗ್ರಾಪಂನಲ್ಲಿ ಅಕ್ರಮವಾಗಿ ನಿವೇಶನಗಳ ಸಂಖ್ಯೆಯನ್ನೇ ತಿದ್ದುಪಡಿ ಮಾಡಿ ಮತ್ತೋರ್ವರಿಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಮನವಿ ಮಾಡಿದರೂ ಗ್ರಾಪಂ ಅಧಿಕಾರಿಗಳು ಗಮನವನ್ನೇ ನೀಡುತ್ತಿಲ್ಲ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥ ಪರಸಪ್ಪ ಅಳಲನ್ನು ತೋಡಿಕೊಂಡರು.
ಚುನಾವಣಾ ಪೂರ್ವದಲ್ಲಿ ರಸ್ತೆಗಳನ್ನೇ ನಿರ್ಮಿಸದೆ ಅನುದಾನಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಮಾಹಿತಿ ನೀಡದೆ ಅಧಿಕಾರಿಗಳು ಮೀನಮೇಷ ಏಣಿಸುತ್ತಿದ್ದಾರೆ. ಜತೆಗೆ ಪಟ್ಟಣದ ಹಳೇ ತಾಲೂಕು ಕಚೇರಿಯ ಹಳೇ ನಾಟಾ ಅಕ್ರಮ ಸಾಗಣೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರರಾದ ಪುಂಡಲೀಕರಪ್ಪ, ಡಾಕಪ್ಪ ಪಾಣಿ ಆಗ್ರಹಿಸಿದರು.
ಮಾವಿನಬಳ್ಳಿಕೊಪ್ಪದಿಂದ ಕೋಡಂಬಿವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮಾಡಿದ್ದು ಸಂಪೂರ್ಣ ಕಳಪೆ ಆಗಿದೆ. ಕಾಮಗಾರಿಯ ಬಗ್ಗೆ ತನಿಖೆ ನಡೆಸಬೇಕು ಎಂದು ಗಣಪತಿ ಮಾವಿನಬಳ್ಳಿಕೊಪ್ಪ ಅಧಿಕಾರಿಗಳ ಗಮನಕ್ಕೆ ತಂದರು.
ಅಧಿಕಾರಿಗಳು-ಜನರ ನಡುವೆ ವಾಗ್ವಾದ: ರೈತರಿಗೆ ಪೋಡಿ ದುರಸ್ತಿಯಲ್ಲಿ ಹಾಗೂ ಖಾತೆ ಬದಲಾವಣೆಯಲ್ಲಿ ವಿಳಂಬ ಆಗುತ್ತಿದೆ. ಇದರಿಂದ ಸರ್ಕಾರಿ ಸಾಲ-ಸೌಲಭ್ಯ ಪಡೆಯಲು ಅನಾನುಕೂಲವಾಗುತ್ತಿದೆ. ಸಮರ್ಪಕವಾದ ದಾಖಲೆಗಳಿದ್ದರೂ ಅಧಿಕಾರಿಗಳು ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದ್ದಾರೆ. ಸರ್ವೇ ಇಲಾಖೆಯಲ್ಲಿ ವಿಳಂಬ, ನಕ್ಷೆ ನೀಡದಿರುವುದು. ಕಂದಾಯ ಇಲಾಖೆಯಲ್ಲಿ, ಪುರಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷೃತನ ಕುರಿತು ದೂರುಗಳು ಸಾರ್ವಜನಿಕರಿಂದ ದಾಖಲಾದವು. ಮೌಖಿಕ ದೂರುಗಳಿಗೆ ಸ್ಪಂದಿಸದೆ ಇರುವುದಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುರೇಶ್, ತಹಸೀಲ್ದಾರ್ ಹುಸೇನ್ ಸರಕಾವಸ್, ತಾಪಂ ಇಒ ಎನ್.ಆರ್.ಪ್ರದೀಪ್ ಕುಮಾರ್, ಸಿಪಿಐ ಎಲ್.ರಾಜಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮೌಖಿಕ, ದಾಖಲೆ ರಹಿತಿ ದೂರಿಗಿಲ್ಲ ಅವಕಾಶ
ಸಾರ್ವಜನಿಕರ ಕುಂದುಕೊರತೆ ಆಲಿಸಿದ ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರಪ್ಪ ನಾಯ್ಕ, ಸಾರ್ವಜನಿಕರಿಂದ ದಾಖಲೆ ರಹಿತ ಮತ್ತು ಮೌಖಿಕ ದೂರುಗಳನ್ನು ದಾಖಲಿಸಿಕೊಳ್ಳಲು ಅವಕಾಶವಿಲ್ಲ. ಸಾರ್ವಜನಿಕರಿಂದ ದಾಖಲಾದ ದೂರುಗಳ ಕುರಿತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಜನತೆಗೆ ಪಾರದರ್ಶಕ ಆಡಳಿತ ದೊರೆಯಬೇಕು ಎಂಬುದೇ ಇಲಾಖೆಯ ಧ್ಯೇಯವಾಗಿದೆ. ಅಧಿಕಾರಿಗಳು ಲಂಚ ಅಥವಾ ಕೆಲಸ ಕಾರ್ಯದಲ್ಲಿ ವಿಳಂಬ ನೀತಿ ತೋರಿದರೆ ಲೋಕಾಯುಕ್ತ ಪೊಲೀಸ್ ಇಲಾಖೆಯನ್ನು ಮುಕ್ತವಾಗಿ ಸಂಪರ್ಕಿಸಬಹುದು ಎಂದರು.