ಜಿಲ್ಲೆ

ಹಲವೆಡೆ ಎಸ್‌ಒಪಿ ಅನುಸರಿಸುತ್ತಿಲ್ಲ

ಬೆಳಗಾವಿ: ಹಾಸ್ಟೆಲ್‌ಗಳು ಹಾಗೂ ಇತರ ಸಂಸ್ಥೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ಅನುಸರಿಸುತ್ತಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಸತಿ ನಿಲಯಗಳು ಹಾಗೂ ಇತರ ಸಂಸ್ಥೆಗಳಿಗೆ ಭೇಟಿ ನೀಡಿದಾಗ, ಎಸ್‌ಒಪಿ ಅನುಸರಿಸದಿರುವುದು ಕಂಡುಬಂದಿದೆ. ಕೆಲವೆಡೆ ಮಹಿಳೆಯರಿಗೆ ಯಾವುದೇ ಭದ್ರತೆ ಮತ್ತು ಸುರಕ್ಷತಾ ಕ್ರಮ ಇರಲಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನುಗಳು ಮತ್ತು ತುರ್ತು ಸಂಪರ್ಕ ಸಂಖ್ಯೆಗಳ ಬಗ್ಗೆ ತಿಳಿದಿರಲಿಲ್ಲ. ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆಯೂ ಅರಿವು ಇರಲಿಲ್ಲ ಎಂದರು.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾದ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಡಳಿತಗಳು ಮತ್ತು ಸಂಸ್ಥೆಗಳಿಗೆ ಐದು ತಿಂಗಳ ಹಿಂದೆ ಪತ್ರ ಬರೆದು, ಎಸ್‌ಒಪಿ ಪಾಲನೆ ಕುರಿತು ಮಾಹಿತಿ ಕೇಳಿದ್ದೆವು. ಆದರೆ, ಇನ್ನೂ ಕೊಟ್ಟಿಲ್ಲ. ಈಗ ಕೋಲ್ಕತದ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಘಟನೆ ನಡೆದ ನಂತರ ಮತ್ತೊಮ್ಮೆ ಪತ್ರ ಬರೆದಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಯೂ ಸಂವಹನ ನಡೆಸಿ, ಹಾಸ್ಟೆಲ್‌ಗಳು ಮತ್ತು ಸಂಸ್ಥೆಗಳಲ್ಲಿ ಎಸ್‌ಒಪಿ ಅನುಸರಿಸುತ್ತಿರುವ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದೇವೆ ಎಂದರು.

ಎಸ್‌ಒಪಿ ಪಾಲನೆಯಾಗದ ಪರಿಣಾಮ ಇತ್ತೀಚೆಗೆ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್‌ನಲ್ಲಿ ಬಾಲಕಿ ಕೊಲೆಯಾಗಿದೆ. ಕೆಲವೆಡೆ ಜಿಲ್ಲಾಡಳಿತ ಸಭೆ ನಡೆಸಿದ್ದು, ತಾವು ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ‘ಡಿ’ ದರ್ಜೆ ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದಿರುವುದು ಗಮನಕ್ಕೆ ಬಂದಿದೆ. ಏಜೆನ್ಸಿ ಗುತ್ತಿಗೆ ರದ್ದುಪಡಿಸುವಂತೆ ಸೂಚಿಸಲಾಗಿದೆ ಎಂದರು.