ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಜನರಿಗೆ 3-4 ತಿಂಗಳಲ್ಲಿ ಕಾವೇರಿ ನೀರನ್ನು ಪೂರೈಸಲಾಗುವುದು ಎಂದು ಡಿಸಿಎಂ ಶಿವಕುಮಾರ್ ಭರವಸೆ ನೀಡಿದರು.
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಎಂ.ಕೃಷ್ಣಪ್ಪ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದ್ದು, ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಅಂತಿಮ ಹಂತದಲ್ಲಿದೆ. ಮುಂದಿನ 3-4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ತಕ್ಷಣವೇ ನೀರು ಪೂರೈಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ 18 ಕಿ.ಮೀ. ರಸ್ತೆಯ ಒತ್ತಡ ಕಡಿಮೆ ಮಾಡಲು ಪರ್ಯಾಯ ರಸ್ತೆ ಮಾಡಬೇಕಿದೆ. ಕನಕಪುರ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಧ್ಯೆ ಹೊಸ ರಸ್ತೆ ನಿರ್ಮಿಸುವ ಯೋಜನೆಗೆ ಈ ಹಿಂದೆ ಬಿಡಿಎ ಅಧಿಸೂಚನೆ ಹೊರಡಿಸಿದೆ. ಅದಕ್ಕೆ ಮರುಜೀವ ನೀಡಲು ಪ್ರಯತ್ನ ಆರಂಭವಾಗಿದೆ ಎಂದರು.
ಕಾನೂನು ಚೌಕಟ್ಟಿನಲ್ಲಿ ಜನರಿಗೆ ಸಹಾಯ:
ಜನ ಸೇವೆ ಜನಾರ್ದನ ಸೇವೆ ಎಂಬ ಮಾತನ್ನು ನಂಬಿ ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ. ಶ್ರೀ ಶಿವಕುಮಾರ ಸ್ವಾಮೀಜಿಗಳು, ‘ದೊಡ್ಡವನಾಗಲು ಪ್ರಯತ್ನ ಮಾಡಬೇಡ, ಒಳ್ಳೆಯವನಾಗಲು ಪ್ರಯತ್ನ ಮಾಡು, ಆಗ ತಂತಾನೇ ದೊಡ್ಡವನಾಗುತ್ತೀಯಾ’ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಜನಪರ ಸರ್ಕಾರವಾಗಿ ಕೆಲಸ ಮಾಡುತ್ತಿದೆ. ಒಂದೇ ದಿನದಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೂ ಕಾನೂನು ಚೌಕಟ್ಟಿನಲ್ಲಿ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ ಎಂದು ಡಿಸಿಎಂ ತಿಳಿಸಿದರು.