ಜಿಲ್ಲೆ

ಮಹಿಳಾ ದಸರಾದಲ್ಲಿ ಹಾಡು, ನೃತ್ಯ, ಫ್ಯಾಷನ್ ಶೋ ...

ಮೈಸೂರು: ಮಹಿಳಾ ದಸರಾದಲ್ಲಿ ಹಾಡು, ನೃತ್ಯ, ಫ್ಯಾಷನ್ ಶೋ ಮಾಡಿದ್ದ ಮಹಿಳೆಯರು, ರಕ್ಷಣಾ ಪಾಠ ತಿಳಿದುಕೊಂಡರು.

ನಗರದ ಜೆ.ಕೆ.ಮೈದಾನದಲ್ಲಿ ದಸರಾ ಮಹೋತ್ಸವ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಮಹಿಳಾ ದಸರಾದಲ್ಲಿ ಸಂಭ್ರಮ ಮನೆ ಮಾಡಿತ್ತು. ಎರಡು ದಿನಗಳಿಂದ ಹಾಡಿ, ಕುಣಿದು ಸಂಭ್ರಮಿಸುವುದರೊಂದಿಗೆ ಭರ್ಜರಿ ಸಂತಸಗೊಂಡಿದ್ದ ಮಹಿಳೆಯರು, ಸ್ವಯಂ ರಕ್ಷಣೆಯ ಪಾಠ ಕಲಿತರು.

ರ‌್ಯಾಂಬೊ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಸೆಲ್ಫ್ ಡಿಫೆನ್ಸ್ ಸರ್ವೀಸ್ ಸಂಸ್ಥೆ ಸದಸ್ಯರು, ಮಹಿಳೆಯರಿಗೆ ಕರಾಟೆ ಮೂಲಕ ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಿದರು.

ರಂಗೋಲಿ ಬಿಡಿಸುವಾಗ, ವಾಯು ವಿಹಾರಕ್ಕೆ ತೆರಳಿದ್ದಾಗ, ಮಾರುಕಟ್ಟೆಯಲ್ಲಿ ಬ್ಯಾಗ್ ಹಿಡಿದು ನಡೆಯುವಾಗ ಆಗುವ ಸರಗಳ್ಳತನ, ದಾಳಿ ಸೇರಿದಂತೆ ಇನ್ನಿತರ ಸಂಕಷ್ಟದ ಸಂದರ್ಭದಲ್ಲಿ ತಮ್ಮನ್ನು ತಾವು ಹೇಗೆ ಕಾಪಾಡಿಕೊಂಡು ದಾಳಿಯಿಂದ ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿ ಜಾಗೃತಿ ಮೂಡಿಸಲಾಯಿತು.

ಇದಕ್ಕೂ ಮುನ್ನ್ನ ಸರ್ಕಾರಿ ಅಂಧ ಶಾಲೆಯ ವಿದ್ಯಾರ್ಥಿಗಳು ‘ನಮಗೆ ಅನುಕಂಪ ಬೇಡ ಅವಕಾಶ ಬೇಕು’ ಎಂಬ ಸಂದೇಶ ಸಾರುವ ಹಾಡುಗಳ ಸಂಯೋಜನೆಗೆ ಸೊಗಸಾಗಿ ಹೆಜ್ಜೆ ಹಾಕಿದರು. ಅಲ್ಲದೇ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದ್ದ ವನಿತೆಯರು ಜಾನಪದ ಸೇರಿದಂತೆ ವಿವಿಧ ಬಗೆಯ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಸಿದ್ದಯ್ಯ ಸ್ವಾಮಿ ಬನ್ನಿ... ಎಂದು ಜಾನಪದ ಗೀತೆಯನ್ನು ಹಾಡುವ ಮೂಲಕ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಚ್.ಡಿ. ಕೋಟೆ ಮತ್ತು ಕೆ.ಆರ್.ನಗರ ತಾಲೂಕಿನ ಮಹಿಳೆಯರು ಸಮೂಹ ನೃತ್ಯ ಪ್ರದರ್ಶನ ಮಾಡಿದರೆ ಎಚ್.ಡಿ.ಕೋಟೆ ಹಾಡಿಯೊಂದರ ಬುಡಕಟ್ಟು ಮಹಿಳೆಯರು ಬುಡಕಟ್ಟು ನೃತ್ಯ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.

ವಿದ್ವಾನ್ ಡಾ.ದತ್ತಮೂರ್ತಿ ಭಟ್ ಸಂಘಟನೆಯಲ್ಲಿ ನಾಟ್ಯಶ್ರೀ ಕಲಾ ತಂಡದ ಕಲಾವಿದರು ಪೌರಾಣಿಕ ಯಕ್ಷಗಾನ ಪ್ರದರ್ಶನ ಮಾಡಿದರು. ಅಂಗವಿಕಲರ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್ ವೈಯಕ್ತಿಕವಾಗಿ ಬಹುಮಾನ ನೀಡುವ ಮೂಲಕ ಅಭಿನಂದಿಸಿದರು.

ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಲೋಲಾಕ್ಷಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದೇಶ ನೀಡಿದರು.