ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಣಸೋಡು ಗ್ರಾಮದ ಸೀತಾಬಾಯಿ (50) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಪತಿ ರೂಪ್ಲಾ ನಾಯ್ಕ, ಹನುಮಂತ ನಾಯ್ಕ ಸೇರಿ ಇಬ್ಬರು ಪುತ್ರರೊಂದಿಗೆ ಹುಣಸೋಡು ಗ್ರಾಮದಲ್ಲಿ ವಾಸವಾಗಿದ್ದಾರೆ.
ಚಿತ್ರದುರ್ಗದ ನೀರಾವರಿ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ಮಲ್ಲಿಕಾರ್ಜುನ್ ಎಂಬುವರ ಮನೆ ಶಿವಮೊಗ್ಗ ವಿಜಯನಗರದಲ್ಲಿದ್ದು ಸೀತಾಬಾಯಿ ಅವರ ಕಿರಿಯ ಪುತ್ರ ಹನುಮಂತ ನಾಯ್ಕ ಕಾರು ಚಾಲಕನಾಗಿದ್ದ. ಶನಿವಾರ ಸಂಜೆ ವಿಜಯನಗರದಲ್ಲಿ ಮನೆಯಲ್ಲಿ ಒಬ್ಬರೇ ಇದ್ದ ಇಂಜಿನಿಯರ್ ಮಲ್ಲಿಕಾರ್ಜುನ್ ಪತ್ನಿ ಕಮಲಮ್ಮ ಅವರ ಕೊಲೆಯಾಗಿತ್ತು. ಮನೆಯಲ್ಲಿದ್ದ 35 ಲಕ್ಷ ರೂ. ಕೂಡ ಕಳವಾಗಿತ್ತು.
ಕೊಲೆ ಮತ್ತು 35 ಲಕ್ಷ ರೂ. ಕಳವು ಮಾಡಿರುವ ಬಗ್ಗೆ ಕಾರು ಚಾಲಕನಾಗಿದ್ದ ಹನುಮಂತ ನಾಯ್ಕನ ಮೇಲೆ ಅನುಮಾನ ವ್ಯಕ್ತವಾಗಿದ್ದು ತುಂಗಾನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅದೇ ದಿನದಿಂದ ಹನುಮಂತ ನಾಯ್ಕನ ಮೊಬೈಲ್ ಕೂಡ ಸ್ವಿಚ್‌ಆಫ್ ಆಗಿದ್ದು ಆತ ತಲೆಮರೆಸಿಕೊಂಡಿದ್ದಾನೆ. ತನಿಖೆ ಭಯದಿಂದ ಹನುಮಂತ ನಾಯ್ಕ ಅವರ ತಂದೆ ರೂಪ್ಲಾ ನಾಯ್ಕ ಮತ್ತು ಹಿರಿಯ ಸಹೋದರ ಕೂಡ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಇದರಿಂದ ಮನನೊಂದ ಸೀತಾಬಾಯಿ ಮನೆಯಲ್ಲಿ ಒಬ್ಬರೇ ಇದ್ದಾಗ ಮನನೊಂದು ಆತ್ಮಹತ್ಯೆ ಯತ್ನಿಸಿದ್ದಾರೆ. ಅಕ್ಕಪಕ್ಕದವರು ಅವರನ್ನು ರಕ್ಷಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೀತಾಬಾಯಿ ಪ್ರಾಣಾಪಾಯದಿಂದ ಪಾರಾಗಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.