ಜಿಲ್ಲೆ

ಬುದ್ದಿ ಮಾತು ಹೇಳಿದ ತಾಯಿಯ ಬಲಿ ಪಡೆದ ಸುಪುತ್ರ

ವಿಜಯವಾಣಿ: ಬೇಜವಾಬ್ದಾರಿ ವರ್ತನೆ ಮತ್ತು ಕುಡಿತದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದ ಮಗನಿಗೆ ಸರಿ ದಾರಿಯಲ್ಲಿ ಹೋಗಲು ಸಲಹೆ ನೀಡಿದ್ದಕ್ಕೆ ತಾಯಿ ಜೀವ ಕಳೆದುಕೊಂಡಿದ್ದು ಗೌರಿಬಿದನೂರು ತಾಲೂಕಿನ ಗೌಡಸಂದ್ರದಲ್ಲಿ ಸುಪುತ್ರನೇ ಹೆತ್ತ ತಾಯಿಯನ್ನು ಕೊಂದು ಹಾಕಿದ್ದಾನೆ.

ಗೌಡಸಂದ್ರದ ಚಿಕ್ಕಗಂಗಪ್ಪನ ಪತ್ನಿ ಅಕ್ಕಮ್ಮ(65) ಮಗನಿಂದ ಕೊಲೆಯಾದ ಮಹಿಳೆ. ಹೆತ್ತು ಹೊತ್ತು ಸಾಕಿ ಸಲುಹಿದ ಋಣದ ಪರಿವೇ ಇಲ್ಲದೇ ತಾಯಿಯನ್ನು ಕೊಂದವನು ಸಿದ್ದಲಿಂಗಪ್ಪ (36). ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

*ಘಟನೆ ಹಿನ್ನೆಲೆ

ಅಕ್ಕಮ್ಮ ಗ್ರಾಮದಲ್ಲಿ ಕುರಿಗಳನ್ನು ಸಾಕುತ್ತ ಜೀವನ ಸಾಗಿಸುತ್ತಿದ್ದಳು. ಇದರಲ್ಲಿ ಬಂದ ಆದಾಯವನ್ನು ಮನೆಗೆ ಮೀಸಲಿಟ್ಟು ಕುಟುಂಬಕ್ಕೆ ಆಧಾರವಾಗಿದ್ದಳು. ಇದರ ನಡುವೆ ಸಿದ್ದಲಿಂಗಪ್ಪ ದಿನಕ್ಕೊಂದು ಕುರಿಯನ್ನು ಮಾರಿಕೊಂಡು ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದ. ಇದರ ಬಗ್ಗೆ ಪ್ರಶ್ನಿಸಿದಾಗಲೆಲ್ಲ ಗಲಾಟೆ ಮಾಡುತ್ತಿದ್ದ. ಇದು ಕುಟುಂಬಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು ಇದು ಕಳೆದ ಭಾನುವಾರ ವಿಕೋಪಕ್ಕೆ ಹೋಗಿದೆ. ಗಟ್ಟಿಯಾಗಿ ತಾಯಿ ಮಗನನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಆತ ಮನೆಯಲ್ಲಿದ್ದ ಆಯುಧದಿಂದ ತಲೆಗೆ ಚೆನ್ನಾಗಿ ಹೊಡೆದು, ಸಾಯಿಸಿದ್ದಾನೆ.

*ಕುಡಿತದ ಚಟಕ್ಕೆ ಹಣ

ಆರೋಪಿ ಸಿದ್ದಲಿಂಗಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ. ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಆದರೆ, ಹಣಕ್ಕೆ ಆಗಾಗ ಪೀಡಿಸುತ್ತಿದ್ದ. ಇದರ ಜತೆಗೆ ಒಂದೊಂದೇ ಕುರಿ ಮಾರಿ, ಆ ಹಣದಲ್ಲಿ ಮೋಜಿನ ಜೀವನ ಸಾಗಿಸುತ್ತಿದ್ದ.