ಹಾನಗಲ್ಲ: ಪತ್ನಿಯನ್ನು ತವರು ಮನೆಯಿಂದ ತನ್ನೊಡನೆ ಕಳಿಸಿಕೊಡಲಿಲ್ಲ ಎಂಬ ಕಾರಣಕ್ಕೆ ಮಾವನ ಮೇಲೆ ಕೋಪಗೊಂಡ ಅಳಿಯ ಮಹಾಶಯನೊಬ್ಬ ಮಾವನ ತೋಟದಲ್ಲಿ ಬೆಳೆದು ನಿಂತಿದ್ದ ನೂರಾರು ಅಡಕೆ ಗಿಡಗಳನ್ನು ಕಡಿದು ನಾಶಪಡಿಸಿದ ಅಮಾನವೀಯ ಘಟನೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆದವಟ್ಟಿ ಗ್ರಾಮದ ಬಸವರಾಜ ಗದಿಗೆಪ್ಪ ಎಂಬಾತನೇ ಕೃತ್ಯ ಎಸಗಿದ ಅಳಿಯ. ಬಸವರಾಜನಿಗೆ 10 ವರ್ಷಗಳ ಹಿಂದೆ ಬಸಾಪುರ ಗ್ರಾಮದ ರೈತ ದೇವೇಂದ್ರಪ್ಪ ಫಕೀರಪ್ಪ ಗಾಣಿಗೇರ ಅವರ ಮಗಳ ಜತೆ ಮದುವೆಯಾಗಿತ್ತು. ಆದರೆ, ಮದ್ಯ ವ್ಯಸನಕ್ಕೆ ಅಂಟಿಕೊಂಡಿದ್ದ ಬಸವರಾಜ ಪತ್ನಿಯೊಂದಿಗೆ ಪ್ರತಿದಿನವೂ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಮೂರು ತಿಂಗಳಿಂದ ತವರು ಮನೆಯಲ್ಲಿಯೇ ವಾಸವಾಗಿದ್ದಳು. ಪತ್ನಿಯನ್ನು ತನ್ನೊಡನೆ ಕಳಿಸಿಕೊಡುವಂತೆ ಬಸವರಾಜ ಮಾವನ ಮನೆಗೆ ಬಂದು ಒತ್ತಾಯಿಸುತ್ತಿದ್ದನೆನ್ನಲಾಗಿದೆ. ಮದ್ಯ ಸೇವಿಸುವುದನ್ನು ಬಿಟ್ಟರೆ ಮಗಳನ್ನು ಕಳುಹಿಸುತ್ತೇವೆ ಎಂದು ತವರು ಮನೆಯವರು ಹಲವು ಬಾರಿ ಹೇಳಿದ್ದರು. ಆದರೂ ಬಸವರಾಜ ಮದ್ಯ ಸೇವಿಸುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಮಗಳನ್ನು ನಿನ್ನೊಂದಿಗೆ ಕಳುಹಿಸುವುದಿಲ್ಲ ಎಂದು ದೇವೇಂದ್ರಪ್ಪ ಮಗಳನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದರು.
ಮಾವ ದೇವೇಂದ್ರಪ್ಪ ಎರಡು ವರ್ಷಗಳ ಹಿಂದೆ ಹೊಲದಲ್ಲಿ ಅಡಕೆ ಗಿಡಗಳನ್ನು ಹಚ್ಚಿದ್ದರು. ಇನ್ನು ಮೂರು ವರ್ಷಕ್ಕೆ ಫಸಲು ಆರಂಭಗೊಳ್ಳುತ್ತಿತ್ತು. ಪತ್ನಿಯನ್ನು ನನ್ನ ಮನೆಗೆ ಕಳಿಸಿಕೊಡುತ್ತಿಲ್ಲ ಎಂದು ಕೋಪಗೊಂಡಿದ್ದ ಅಳಿಯ ಬಸವರಾಜ, ಸೆ. 23ರಂದು ರಾತ್ರಿ ಮಾವನ ತೋಟದಲ್ಲಿನ 100ಕ್ಕೂ ಅಧಿಕ ಅಡಕೆ ಗಿಡಗಳನ್ನು ಕಡಿದು ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪತಿ-ಪತ್ನಿಯರ ಕಲಹದಲ್ಲಿ ಅಳಿಯ ಮಾವನಿಗೆ ಬುದ್ಧಿ ಕಲಿಸಲು ಸೊಂಪಾಗಿ ಬೆಳೆದ ಅಡಕೆ ಗಿಡಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕಿರುವುದು ರೈತ ಸಮುದಾಯವನ್ನು ಗಾಬರಿಗೊಳಿಸಿದೆ. ಮದ್ಯದ ಅಮಲು ಲಕ್ಷಾಂತರ ಬೆಲೆಬಾಳುವ ತೋಟವನ್ನು ಬಲಿ ತೆಗೆದುಕೊಂಡಿದೆ. ಈ ಕುರಿತು ಆಡೂರು ಠಾಣೆಯಲ್ಲಿ ದೂರು ದಾಖಲಾಗಿದೆ.