ಕೊಲೆಯಾದ ಕವಿತಮ್ಮ 
ಜಿಲ್ಲೆ

ಆಸ್ತಿಗಾಗಿ ಅತ್ತೆಯನ್ನೇ ಕೊಂದ ಅಳಿಯ?

ಕೊಲೆಯಾದ ಕವಿತಮ್ಮ

ಮಾವನ ಮೇಲೂ ಹಲ್ಲೆ ಮಾಡಿ ತಲೆಮರೆಸಿಕೊಂಡ ಆರೋಪಿ

ಕೊಲೆಯಾದ ಕವಿತಮ್ಮ

ಚಿಂತಾಮಣಿ: ತಾಲೂಕಿನ ಅಂಬಾಜಿದುರ್ಗ ಹೋಬಳಿ ಬಿಂಗಾನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಅತ್ತೆಯನ್ನೇ ಚಾಕುವಿನಿಂದ ಇರಿದು ಅಳಿಯನೇ ಕೊಲೆ ಮಾಡಿದ್ದಾನೆ.
ಕವಿತಮ್ಮ (40) ಕೊಲೆಯಾದವರು. ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗ್ರಾಮದ ಕೆ.ಚಂದ್ರು ಆರೋಪಿ. ಆಸ್ತಿ ವಿವಾದವೇ ಕೊಲೆಗೆ ಕಾರಣ ಎನ್ನಲಾಗಿದೆ.
ಏನಿದು ಘಟನೆ: ಕವಿತಮ್ಮ, ಈಶ್ವರಪ್ಪ ದಂಪತಿ ಪುತ್ರಿ ಮಮತಾಳನ್ನು ಈಶ್ವರಪ್ಪ ಅವರ ಅಕ್ಕ ಯಶೋದಮ್ಮನ ಮಗ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗ್ರಾಮದ ಕೆ.ಚಂದ್ರು ಜತೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಗಂಡುಮಗು ಇದೆ. ಇತ್ತೀಚೆಗೆ ಆಸ್ತಿಗಾಗಿ ಪತಿ ಮನೆಯವರು ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮಮತಾ ಬಿಂಗಾನಹಳ್ಳಿಯ ತವರು ಮನೆಗೆ ಬಂದಿದ್ದಳು ಎನ್ನಲಾಗಿದೆ.ಮಂಗಳವಾರ ರಾತ್ರಿ 7.30ರ ಸುಮಾರಿಗೆ ಬಿಂಗಾನಹಳ್ಳಿಗೆ ಬಂದ ಚಂದ್ರು, ಈಶ್ವರಪ್ಪ ತಲೆಗೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಬಳಿಕ ಕವಿತಮ್ಮ ಅವರ ಕತ್ತನ್ನು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರು ಘಟನಾ ಸ್ಥಳ ಮತ್ತು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಎಸ್‌ಪಿ ರಜಾ ಇಮಾಂ ಖಾಸೀಂ ಡಿವೈಎಸ್‌ಪಿ ಪಿ.ಮುರಳೀಧರ್, ಪಿಎಸ್‌ಐಗಳಾದ ಶಿವರಾಜ್, ವಿಜಿಕುಮಾರ್ ಮತ್ತಿತರರು ಇದ್ದರು.
ದೊಡ್ಡಮ್ಮನ ಮನೆಗೆ ಕಳಿಸಿದ ತಾಯಿ
ಚಂದ್ರು ಸಹೋದರ ದೇವನಹಳ್ಳಿಯಲ್ಲಿರುವ ನರಸಿಂಹಮೂರ್ತಿ ಮಂಗಳವಾರ ಸಂಜೆ ಕರೆ ಮಾಡಿ ಕೆ.ಕೊತ್ತನೂರಿಗೆ ಬರುವಂತೆ ಧಮಕಿ ಹಾಕಿದರು. ಬರುವುದಿಲ್ಲ ಎಂದಾಗ ಬಿಂಗಾನಹಳ್ಳಿಗೆ ಚಂದ್ರು ಬರುತ್ತಿದ್ದು ನಿಮ್ಮನ್ನು ಕೊಲೆ ಮಾಡುತ್ತಾನೆ ಎಂದು ಹೆದರಿಸಿದ. ವಿಷಯ ತಿಳಿದ ತಾಯಿ ನನ್ನನ್ನು ದೊಡ್ಡಮ್ಮನ ಮನೆಗೆ ಕಳಿಸಿದರು ಎಂದು ಮಮತಾ ಸುದ್ದಿಗಾರರಿಗೆ ತಿಳಿಸಿದರು.ಪತಿ ಚಂದ್ರು, ಭಾವ ನರಸಿಂಹಮೂರ್ತಿ ಮತ್ತು ಅತ್ತೆ ಯಶೋದಮ್ಮ ಅವರು ಆಸ್ತಿಗಾಗಿ ತಂದೆ-ತಾಯಿಗೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಅಮಿಟಿಗಾನಹಳ್ಳಿಯ ಆಂಜಮ್ಮ ಮತ್ತು ಆಂಜಪ್ಪ ಅವರ ಬೆಂಬಲವೂ ಇದೆ ಎಂದು ಮಮತಾ ಆರೋಪಿಸಿದರು.