ಮುಂಡರಗಿ: ಕೌಟುಂಬಿಕ ಕಲಹದಿಂದ ನೊಂದು ತಂದೆಯೇ ತನ್ನಿಬ್ಬರು ಮಕ್ಕಳು ಹಾಗೂ ಅಳಿಯನನ್ನು ತುಂಗಭದ್ರಾ ನದಿಗೆ ಎಸೆದು ಬಳಿಕ ತಾನೂ ಜಿಗಿದ ಘಟನೆ ಮಂಗಳವಾರ ಸಂಜೆ ತಾಲೂಕಿನ ಕೊರ್ಲಹಳ್ಳಿ ಸಮೀಪ ನಡೆದಿದೆ.
ತಾಲೂಕಿನ ಮಕ್ತುಂಪುರ ಗ್ರಾಮದ ಮಂಜುನಾಥ ಅರಕೇರಿ (41) ಈ ಕೃತ್ಯವೆಸಗಿದವ. ಆತನ ಮಕ್ಕಳಾದ ಧನ್ಯಾ(6) ಪವನ್(4) ಹಾಗೂ ಅಳಿಯ (ಪತ್ನಿಯ ಅಣ್ಣನ ಮಗ) ವೇದಾಂತ (4) ನದಿಗೆ ಎಸೆಯಲ್ಪಟ್ಟು ಜಲಸಮಾಧಿಯಾಗಿರುವವರು. ಮಂಜುನಾಥ ಮದ್ಯ ವ್ಯಸನಿಯಾಗಿದ್ದ. ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಹೊರಬರಬೇಕಿದೆ.
ಮಂಜುನಾಥ ಮಕ್ತುಂಪುರದಿಂದ ತನ್ನ ಇಬ್ಬರು ಮಕ್ಕಳು ಮತ್ತು ಅಳಿಯನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಕೊರ್ಲಹಳ್ಳಿಯ ತುಂಗಭದ್ರಾ ನದಿಯ ಸೇತುವೆ ಮೇಲೆ ಬಂದಿದ್ದಾನೆ. ಸೇತುವೆ ಮಧ್ಯಭಾಗದಲ್ಲಿ ಬೈಕ್ ನಿಲ್ಲಿಸಿ, ಇಳಿದು ಮೊದಲು ಮಕ್ಕಳನ್ನು ನದಿಗೆ ಎಸೆದು ನಂತರ ತಾನೂ ನದಿಗೆ ಜಿಗಿದಿದ್ದಾನೆ. ನಾಲ್ವರೂ ಜಲಸಮಾಧಿಯಾಗಿದ್ದಾರೆ.
ಸ್ಥಳಕ್ಕೆ ಮುಂಡರಗಿ ಹಾಗೂ ಹೂವಿನಹಡಗಲಿ ಪೊಲೀಸರು, ಅಗ್ನಿಶಾಮಕ ದಳದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿಯಾಗಿದ್ದರಿಂದ ನದಿಯಲ್ಲಿ ಶೋಧಕ್ಕೆ ತೊಂದರೆಯಾಗಿದೆ.