ತುಮಕೂರು : ಕಾಯಕಯೋಗಿ, ನಡೆದಾಡುವ ದೇವರು, ಕರ್ನಾಟಕ ರತ್ನ ಶಿವಕುಮಾರ ಶ್ರೀಗಳ ತೃತೀಯ ಪುಣ್ಯಸ್ಮರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮ, ಉತ್ಸವ, ಮೆರವಣಿಗೆಯನ್ನು ಕೈಬಿಡಲಾಗಿತ್ತು. ಶ್ರೀಗಳ ಪುಣ್ಯಸ್ಮರಣೆ ದಿನವನ್ನು ‘ದಾಸೋಹ ದಿನ’ವನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಶ್ರೀಮಠದಲ್ಲಿ ದಾಸೋಹ ದಿನಕ್ಕೆ ಚಾಲನೆ ನೀಡಿದರು.
ಶ್ರೀಗಳ ಗದ್ದುಗೆಗೆ, ಯಂತ್ರಧಾರಣೆ ಮಂಚಕ್ಕೆ, ಮಠದ ಮುಂಭಾಗ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು. ಗದ್ದುಗೆಯಲ್ಲಿ ಬೆಳಗಿನ ಜಾವ ಮಹಾರುದ್ರಾಭಿಷೇಕದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕರೊನಾ ಮಾರ್ಗಸೂಚಿ ಅನ್ವಯವೇ ಭಕ್ತಗಣಕ್ಕೆ ದಿನವಿಡೀ ಶ್ರೀಗಳ ಗದ್ದುಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಸಿಎಂ ವಿಶೇಷ ಪೂಜೆ: ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ 10.10ಕ್ಕೆ ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶಗೌಡ, ಮಾಜಿ ಸಚಿವ ಸೊಗಡುಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ನೇರವಾಗಿ ಪ್ರಸಾದ ನಿಲಯಕ್ಕೆ ತೆರಳಿದ ಬೊಮ್ಮಾಯಿ ಅವರು ಮಠದ ಮಕ್ಕಳಿಗೆ ಕೀರು-ಬೂಂದಿ ಬಡಿಸಿ ಸಾಂಕೇತಿಕವಾಗಿ ದಾಸೋಹ ದಿನಕ್ಕೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಶ್ರೀಮಠದ ಪವಿತ್ರ ಆವರಣದಲ್ಲಿ ದಾಸೋಹ ದಿನಕ್ಕೆ ಚಾಲನೆ ನೀಡಿದ್ದೇವೆ. ಶಿವಕುಮಾರ ಸ್ವಾಮೀಜಿ ಹಾಕಿಕೊಟ್ಟಿರುವ ದೊಡ್ಡ ಪರಂಪರೆಯನ್ನು ಸರ್ಕಾರ ಗುರುತಿಸುತ್ತಿದೆ. ಹಾಗಾಗಿ, ನಾನು ಕೆಲವು ಮಕ್ಕಳಿಗೆ ಅನ್ನ ಬಡಿಸಿದ್ದೇನೆ. ನಮ್ಮ ಸರ್ಕಾರದ ಪ್ರಮುಖ ಧ್ಯೇಯ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ದಾಸೋಹ ನೀಡುವುದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ‘ದಾಸೋಹ ದಿನ’ವನ್ನು ಸರ್ಕಾರದ ಕಾರ್ಯಕ್ರಮವಾಗಿ ಮುಂದುವರಿಸಲಿದ್ದೇವೆ. ಇನ್ನಷ್ಟು ವ್ಯವಸ್ಥಿತವಾಗಿ ಹೊಸ ರೂಪುರೇಷೆ ಕೊಟ್ಟು ಇಡೀ ಕರ್ನಾಟಕದಾದ್ಯಂತ ಎಲ್ಲೆಲ್ಲಿ ಈ ದಾಸೋಹ ಪರಂಪರೆ ಮಾಡಲು ಸಾಧ್ಯವಿದೆ. ಅಲ್ಲೆಲ್ಲಾ ಮಾಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಜಿಲ್ಲಾಧಿಕಾರಿ ಡಾ.ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಕೇಂದ್ರ ವಲಯ ಐಜಿಪಿ ಚಂದ್ರಶೇಖರನ್, ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರವಿಶಂಕರ್ ಸೇರಿದಂತೆ ವಿವಿಧ ಗಣ್ಯರು, ವಿವಿಧ ಮಠಗಳ ಮಠಾಧೀಶರು ಇದ್ದರು.
ಸಿದ್ದಲಿಂಗ ಶ್ರೀಗಳಿಂದ ವಿಶೇಷ ಪೂಜೆ : ಶಿವಕುಮಾರ ಶ್ರೀಗಳು ಪುಣ್ಯಸ್ಮರಣೆ ಅಂಗವಾಗಿ ಶ್ರೀಗಳ ಗದ್ದುಗೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರಾತಃಕಾಲ ರುದ್ರಾಭಿಷೇಕ ಜತೆ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಸಮ್ಮುಖದಲ್ಲಿ ವಿವಿಧ ಮಠಾಧೀಶರು ಸೇರಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದರು. ಕರೊನಾ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮ, ಉತ್ಸವ ರದ್ದು ಪಡಿಸಲಾಗಿತ್ತು.
ಭಕ್ತರಿಗೆ ಪ್ರಸಾದ ವ್ಯವಸ್ಥೆ : ಸಿಎಂ ಬಸವರಾಜ ಬೊಮ್ಮಾಯಿ ಅವರು ದಾಸೋಹ ದಿನಕ್ಕೆ ಚಾಲನೆ ನೀಡಿದ ಬಳಿಕ ಆರಂಭವಾದ ದಾಸೋಹ ಸೇವೆ ರಾತ್ರಿವರೆಗೆ ಮುಂದುವರಿಯಿತು. ಕೀರು-ಬೂಂದಿ, ಚಿತ್ರಾನ್ನ, ಅನ್ನ-ಸಾರು ಪ್ರಸಾದಕ್ಕೆ ನೀಡಲಾಯಿತು. ಶ್ರೀಗಳ ಗದ್ದುಗೆ ದರ್ಶನದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.