ಜಿಲ್ಲೆ

ವಾಣಿಜ್ಯ ಸಂಕೀರ್ಣದ ಸ್ಥಿತಿ ‘ಸೋಮೇಶ್ವರನೇ ಗತಿ!’

ಮಲ್ಲು ಕಳಸಾಪುರ ಲಕ್ಷ್ಮೇಶ್ವರ

ಪಟ್ಟಣದ ಕೇಂದ್ರ ಭಾಗದಲ್ಲಿರುವ ಪುರಸಭೆಯ ಸೋಮೇಶ್ವರ ವಾಣಿಜ್ಯ ಸಂಕೀರ್ಣದ ಮೇಲಂತಸ್ಥಿನ ಸ್ಥಿತಿ ಅಧೋಗತಿಗೆ ತಲುಪಿದೆ. ಇಲ್ಲಿ ಮಲಮೂತ್ರ ವಿಸರ್ಜನೆ, ಮದ್ಯದ ಬಾಟಲಿ, ತ್ಯಾಜ್ಯ ಬಿಸಾಕಿದ್ದರಿಂದ ಇಡೀ ಪ್ರದೇಶ ಗಬ್ಬು ನಾರುತ್ತಿದೆ.

2003ರಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ 90 ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡು ಆಗಾಗ ದುರಸ್ತಿ ಕಂಡಿರುವ ವಾಣಿಜ್ಯ ಸಂಕೀರ್ಣದ ಸ್ಥಿತಿ ಇದೀಗ ಅತ್ಯಂತ ಶೋಚನೀಯ ಹಂತಕ್ಕೆ ತಲುಪಿದೆ.

ಸಂಕೀರ್ಣದ ಕೆಳಗಿರುವ 50 ಸಣ್ಣ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ಕೊಡಲಾಗಿದೆ ಆದರೆ, ಮೇಲಂತಸ್ತಿನಲ್ಲಿರುವ 10 ದೊಡ್ಡದಾದ ಕೊಠಡಿಗಳಲ್ಲಿ ಕೆಲ ವರ್ಷ ಸರ್ಕಾರಿ ಪಿಯು ಕಾಲೇಜು ನಡೆಸಲಾಗಿತ್ತು. ಕಾಲೇಜು ಹಸ್ತಾಂತರಗೊಂಡು 8-10 ವರ್ಷಗಳವರೆಗೆ ಯಾರೂ ವಾರಸುದಾರರಿಲ್ಲದಂತಾಗಿ ಇಲ್ಲಿ ಮಾಡಬಾರದ್ದನ್ನು ಮಾಡಲಾಗುತ್ತಿದೆ.

ಈಗ 10 ಕೊಠಡಿಗಳಲ್ಲಿ 2ನ್ನು ಮಾತ್ರ ಬಾಡಿಗೆಗೆ ಕೊಡಲಾಗಿದ್ದು ಒಂದನ್ನು ನಿವೃತ್ತ ನೌಕರರ ಸಂಘಕ್ಕೆ ಮತ್ತೊಂದನ್ನು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಕೊಡಲಾಗಿದೆ. ಉಳಿದ 6 ದೊಡ್ಡ ಕೊಠಡಿಗಳು ಧೂಳು ತಿನ್ನುತ್ತಿವೆ. ಯಾವುದೇ ಸೌಲಭ್ಯಗಳಿಲ್ಲದೇ ಹೆಸರಿಗೆ ಮಾತ್ರ ಎಂಬಂತಿರುವ 2 ಸಾರ್ವಜನಿಕ ಶೌಚಗೃಹಗಳನ್ನೇ ಬಳಸುತ್ತಿದ್ದಾರೆ. ಸ್ವಚ್ಛತೆ, ನಿರ್ವಹಣೆ, ಯಾರೂ ಹೇಳೂರು..ಕೇಳೂರು ಇಲ್ಲದ್ದರಿಂದ ಮೇಲಂತಸ್ತು ನೋಡಲಾರದಷ್ಟು ಕೆಟ್ಟ ಪರಿಸ್ಥಿತಿಯಲ್ಲಿದೆ.

ಹಗಲಿನಲ್ಲಿಯೇ ಕಟ್ಟಡದ ಮೇಲೆ ಮಾಡಬಾರದ್ದನ್ನೂ ಮಾಡಲಾಗುತ್ತಿದೆ. ಕೆಳಗಡೆ ಸದಾ ಜನಸಂದಣಿಯಿಂದ ಕೂಡಿರುವ ಈ ಪ್ರದೇಶದ ಮೇಲಂತಸ್ತು ಮಾತ್ರ ಕುಡುಕರ ಅಡ್ಡೆಯಾಗಿದೆ. ರಾಶಿ ರಾಶಿ ಮದ್ಯದ ಬಾಟಲಿ, ಪ್ಯಾಕೆಟ್, ಗುಟ್ಖಾ ಚೀಟಿ ಇತ್ಯಾದಿ ವಸ್ತುಗಳು ಕಣ್ಣಿಗೆ ರಾಚುತ್ತವೆ. ನೀರಿಲ್ಲದ ನೀರಿನ ಸಿಂಟೆಕ್ಸ್, ಪೈಪ್‌ಲೈನ್ ಒಡೆದು ಬಿದ್ದಿವೆ. ಕಟ್ಟಡದ ಮೇಲಿನ ನೀರು ಹರಿದು ಹೋಗಲಾರದೇ ಎಲ್ಲೆಂದರಲ್ಲಿ ಕಟ್ಟಡ ಸೋರುತ್ತಿದೆ. ಒಟ್ಟಿನಲ್ಲಿ ಕಟ್ಟಡದ ಪರಿಸ್ಥಿತಿ ಹೇಳಲಾರದಷ್ಟು ಕೆಟ್ಟಿದ್ದು ಸಂಬಂಧಪಟ್ಟ ಪುರಸಭೆಯವರು ಕೂಡಲೇ ಅವ್ಯವಸ್ಥೆ ಸರಿಪಡಿಸಬೇಕು.

ಪಟ್ಟಣದ ಕೇಂದ್ರ ಭಾಗದ ವಾಣಿಜ್ಯ ಸಂಕೀರ್ಣದ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಮೇಲಂತಸ್ಥಿನ ಕಟ್ಟಡದ ಕೊಠಡಿಗಳನ್ನು ಅಗತ್ಯವಿರುವ ಸರ್ಕಾರಿ ಅಥವಾ ಖಾಸಗಿಯವರಿಗೆ, ಸಂಘ-ಸಂಸ್ಥೆಗಳಿಗೆ ನಿಯಮಾನುಸಾರ ಬಳಕೆಗೆ ಕೊಡಬೇಕು. ನಿತ್ಯ ಸಾವಿರಾರು ಜನರು ಬರುವ ಮಾರುಕಟ್ಟೆ ಪ್ರದೇಶದಲ್ಲಿ ಶೌಚಗೃಹ ಇಲ್ಲದಿರುವುದು ದುರ್ದೈವದ ಸಂಗತಿ. ಶುಲಭ ಶೌಚಗೃಹ ನಿರ್ಮಿಸಬೇಕು. ಸಿಸಿ ಕ್ಯಾಮರಾ ಅಳವಡಿಸಿ ನಿರಂತರ ಸ್ವಚ್ಛತೆಗೆ ಗಮನ ಹರಿಸಬೇಕು. ಅಲ್ಲದೆ, ಕಟ್ಟಡದ ಗುಣಮಟ್ಟ ಕುಸಿದಿದ್ದು ಅಪಾಯ ಸಂಭವಿಸುವ ಮೊದಲೇ ಗುಣಮಟ್ಟ ಪರಿಶೀಲಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಮಂಜುನಾಥ ಮಾಗಡಿ, ನಾಗರಿಕ ವಾಣಿಜ್ಯ ಸಂಕೀರ್ಣದ ಮೇಲಂತಸ್ಥಿನ ಕಟ್ಟಡದ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದು. ಸ್ವಚ್ಛ ಮಾಡಿದರೂ ಕೆಲವರು ಮತ್ತೆ ಮತ್ತೆ ಗಲೀಜು ಮಾಡುತ್ತಾರೆ. ಶೌಚಗೃಹ, ಕೊಠಡಿಗಳಿಗೆ ಹಾಕಿರುವ ಬೀಗ, ಬಾಗಿಲು ಮುರಿಯುತ್ತಾರೆ. ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಅನಕೂಲಕ್ಕಾಗಿ ಶೌಚಗೃಹ ನಿರ್ಮಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸ್ವಚ್ಛತೆಗೆ ಜನರ ಸಹಕಾರ ಅಗತ್ಯ. ಮಹೇಶ ಹಡಪದ, ಮುಖ್ಯಾಧಿಕಾರಿ