ಕೋಲಾರ: ನಗರದ ಕಾಮಾಾಂಭ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ವೈಭವದಿಂದ ನೆರವೇರಿತು.
ದೇವಾಲಯದ ಮುಂಭಾಗ ಮಧ್ಯಾಹ್ನ ರಥೋತ್ಸವಕ್ಕೆ ಮುಜರಾಯಿ ತಹಸೀಲ್ದಾರ್ ಡಾ.ನಯನಾ ಚಾಲನೆ ನೀಡಿದರು.
ಹೋಳಿ ಹುಣ್ಣಿಮೆಯ ಮಾರನೇ ದಿನ ನಡೆಯುವ ಈ ರಥೋತ್ಸವ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ರಥ ಸಾಗುತ್ತಿದ್ದಂತೆ ಜನ ಬಾಳೆಹಣ್ಣು, ದವನವನ್ನು ಬೀಸಿ ರಥಕ್ಕೆ ಶ್ರದ್ಧಾಭಕ್ತಿಯಿಂದ ನಮಿಸಿ ಸಂತಸಗೊಂಡರು.
ರಥೋತ್ಸವದ ಅಂಗವಾಗಿ ದೇವಾಲಯದ ಸುತ್ತಮುತ್ತ ಸುಮಾರು ಮಂದಿ ಹರಿಕೆ ಪೂರೈಸಲು ಸ್ವಾಮಿಯ ಪೂಜೆಗೆ ಬಂದವರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ನೀಡಿದರು.
ಸುಡು ಬಿಸಿಲೆನ್ನದೆ ರಥೋತ್ಸವದಲ್ಲಿ ಭಾಗವಹಿಸಿದ್ದ ಜನ ರಥವನ್ನು ನಗರದ ದೊಡ್ಡಪೇಟೆ, ಬ್ರಾಹ್ಮಣರಬೀದಿ, ಕಾಳಮ್ಮಗುಡಿ ರಸ್ತೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಎಳೆದೊಯ್ದು ತಮ್ಮ ಭಕ್ತಿ ಪ್ರದರ್ಶಿಸಿದರು.
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನರ ದಾಹ ತಣಿಸಲು ಶಂಕರಮಠದಲ್ಲಿ ಅಪ್ಪಣ್ಣ ಮತ್ತು ಸಹೋದರರಿಂದ, ಪಂಚವಟಿ ಹೋಟೆಲ್ ಮುಂಭಾಗ, ಬ್ರಾಹ್ಮಣರ ಬೀದಿಯಲ್ಲಿ ಹಲವು ಭಕ್ತರು, ಕುಡಿಯಲು ನೀರು, ಮಜ್ಜಿಗೆ, ಪಾನಕ, ಹೆಸರು ಬೇಳೆ ಹಂಚುತ್ತಿದ್ದುದು ಕಂಡು ಬಂತು.