ಅನ್ಸಾರ್ ಇನೋಳಿ ಉಳ್ಳಾಲ
ರಾಜ್ಯದ ಅತಿ ದೊಡ್ಡ ಪಂಚಾಯಿತಿ ಎನಿಸಿದ್ದ ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರಿ ವರ್ಷ ಎರಡು ಸಂದಿದ್ದು, ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿ ಮುಗಿದು ಒಂದೂವರೆ ವರ್ಷವಾಗುತ್ತಿದೆ. ಈವರೆಗೂ ಚುನಾವಣೆ ನಡೆಯದ ಕಾರಣ ಪುರಸಭೆ ಆಡಳಿತವಿಲ್ಲದೆ ಅನಾಥವಾಗಿದೆ.
ಅತ್ಯಧಿಕ ಜನಸಂಖ್ಯೆ ಹೊಂದಿದ್ದ ಸೋಮೇಶ್ವರ ಗ್ರಾಮ ಪಂಚಾಯಿತಿ ಇದ್ದಾಗ ರಾಜ್ಯದಲ್ಲೇ ಎರಡನೇ ದೊಡ್ಡ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆಯೂ ಜನರದ್ದಾಗಿತ್ತು. ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆಗೆ ಬಂದಿದ್ದ ಕೋಟ ಶ್ರೀನಿವಾಸ ಪೂಜಾರಿಯವರೇ ಸೋಮೇಶ್ವರವನ್ನು ಮೇಲ್ದರ್ಜೆಗೇರಿಸುವುದು, ಇಲ್ಲವೇ ನಾಲ್ಕು ಪಂಚಾಯಿತಿಯನ್ನಾಗಿ ಮಾಡಬಹುದಿತ್ತು. ಆದರೆ ಈವರೆಗೂ ಆ ಕಾರ್ಯ ಏಕೆ ನಡೆದಿಲ್ಲ ಎಂದು ಶಾಸಕ ಖಾದರ್ ಅವರಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಜನರ ಬೇಡಿಕೆಯಂತೆಯೇ 2019ರ ಜುಲೈನಲ್ಲಿ ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆ ಸಂದರ್ಭ ಸ್ಥಳೀಯ ಶಾಸಕ ಯು.ಟಿ.ಖಾದರ್ ನಗರಾಭಿವೃದ್ಧಿ ಸಚಿವರಾಗಿದ್ದರು. ಕಳೆದ ವರ್ಷ ಜುಲೈವರೆಗೆ ಗ್ರಾಮ ಪಂಚಾಯಿತಿ ಸದಸ್ಯರು ಪುರಸಭೆ ಸದಸ್ಯರಾಗಿ ಮುಂದುವರಿದಿದ್ದರು. ಈ ಅವಧಿ ಮುಗಿದು 17 ತಿಂಗಳುಗಳೇ ಕಳೆದಿವೆ. ಆದರೆ ಈವರೆಗೂ ಚುನಾವಣೆ ನಡೆಯದ ಕಾರಣ ಅಧಿಕಾರಿಗಳು ಆಡಳಿತ ನಡೆಸುವಂತಾಗಿದೆ.
ಸಿಬ್ಬಂದಿ ಕೊರತೆ ಗೋಳು!: ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಅಧಿಕಾರಿಗಳ ಸಹಿತ 97 ಸಿಬ್ಬಂದಿ ಅಗತ್ಯವನ್ನು ಸರ್ಕಾರ ಗುರುತಿಸಿದರೂ, ಈವರೆಗೂ ಶಾಶ್ವತ ಸಿಬ್ಬಂದಿಯಾಗಿ ಮುಖ್ಯಾಧಿಕಾರಿ ಮತ್ತು ವ್ಯವಸ್ಥಾಪಕರು ಮಾತ್ರ ಇದ್ದಾರೆ. ಇವರನ್ನು ಹೊರತುಡಿಸಿ 10 ಮಂದಿ ಇದ್ದರೂ ಅವರು ಶಾಶ್ವತ ಸಿಬ್ಬಂದಿ ಅಲ್ಲ. 6 ಪೌರ ಕಾರ್ಮಿಕರನ್ನು ನೇರ ನೇಮಕಾತಿಗೊಳಿಸಲಾಗಿದೆ. ಗ್ರಾಪಂನಲ್ಲಿದ್ದ ಐವರು ಸಿಬ್ಬಂದಿಯನ್ನು ಉಳಿಸಿಕೊಳ್ಳಲಾಗಿದ್ದು, ಅವರನ್ನು ಶಾಶ್ವತಗೊಳಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪರಿಸರ ಇಂಜಿನಿಯರ್, ಸಮುದಾಯ ಸಂಘಟನಾಧಿಕಾರಿ, ಸಮುದಾಯ ಸಂಘಟಕ, ಕಂದಾಯ ನಿರೀಕ್ಷಕ, ಕಿರಿಯ ಇಂಜಿನಿಯರ್ ಎರಡು ಹುದ್ದೆ, ಹಿರಿಯ ಆರೋಗ್ಯಾಧಿಕಾರಿ, ಆರೋಗ್ಯ ನಿರೀಕ್ಷಕ ಎರಡು ಹುದ್ದೆ, ಪ್ರಥಮ ದರ್ಜೆ ಸಹಾಯಕ ಎರಡು ಹುದ್ದೆ ಖಾಲಿ, ಬಿಲ್ ಕಲೆಕ್ಟರ್ ಹುದ್ದೆ ಖಾಲಿಯಿದೆ. 29 ಪೌರಕಾರ್ಮಿಕರ ಹುದ್ದೆ ಖಾಲಿಯಿದೆ. ಇದರಿಂದಾಗಿ ವಾರಕ್ಕೊಮ್ಮೆ ಉಳ್ಳಾಲ ನಗರಸಭೆಯಿಂದ ಕಿರಿಯ ಅಭಯಂತರರನ್ನು, ವಾರಕ್ಕೆರಡು ದಿನ ಆರೋಗ್ಯ ನಿರೀಕ್ಷಕರನ್ನು ತರಿಸಿಕೊಳ್ಳಲಾಗುತ್ತಿದೆ.
ಜನಪರ ಸರ್ಕಾರ ಎಂದರೆ ಅಧಿಕಾರ ಕೇಂದ್ರೀಕರಣ ಮಾಡಬೇಕೇ ಹೊರತು ವಿಕೇಂದ್ರೀಕರಣವಲ್ಲ. ಸೋಮೇಶ್ವರ ಪುರಸಭೆಯಾಗಿ ಇಷ್ಟು ಸಮಯವಾದರೂ ಜನರ ಆಯ್ಕೆಗೆ ಅವಕಾಶ ನೀಡದೆ ಅಧಿಕಾರಿಗಳು ಅಧಿಕಾರ ನಡೆಸುವುದು ಸೂಕ್ತವಲ್ಲ. ಸ್ಥಳೀಯ ಪ್ರದೇಶಗಳ ಅಭಿವೃದ್ಧಿಯಾಗಬೇಕಾದರೆ ಸ್ಥಳೀಯರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳಿರಬೇಕು. ಶೀಘ್ರ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.
ಯು.ಟಿ.ಖಾದರ್, ಶಾಸಕ
ಸ್ಥಳೀಯಾಡಳಿತ ವ್ಯವಸ್ಥೆ ಅಧಿಕಾರಿಗಳ ಕೈಯಲ್ಲಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಜನಪ್ರತಿನಿಧಿಗಳು, ಆಡಳಿತ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಆದರೆ ಕಳೆದ ಒಂದೂವರೆ ವರ್ಷದಿಂದ ಸೋಮೇಶ್ವರದಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ ಅಭಿವೃದ್ಧಿ, ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ದೀಪಕ್ ಪಿಲಾರ್, ಮಾಜಿ ಸದಸ್ಯ, ಸೋಮೇಶ್ವರ ಪುರಸಭೆ
ಸೋಮೇಶ್ವರ ಪುರಸಭೆಗೆ ಚುನಾವಣೆ ನಡೆಯದ ಕಾರಣ ಸಾಮಾನ್ಯ ಜನರ ಕೆಲಸ ಯಾರಲ್ಲಿ ಮಾಡಿಸಬೇಕೆಂದು ಗೊತ್ತಾಗದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ತಕ್ಷಣ ಚುನಾವಣೆ ನಡೆಸಲು ಸರ್ಕಾರ ಮುಂದಾಗಬೇಕು. ಅದುವರೆಗೆ ಅಧಿಕಾರಿಗಳು ಎಲ್ಲ ಪ್ರದೇಶಕ್ಕೂ ಭೇಟಿ ನೀಡಿ ಮೂಲ ಸೌಕರ್ಯ ಕಲ್ಪಿಸಬೇಕು.
ಸಲಾಂ ಉಚ್ಚಿಲ್, ಸಾಮಾಜಿಕ ಕಾರ್ಯಕರ್ತ