ಶಹಾಪುರದ ದಾನಮ್ಮದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ವಿತರಿಸಲಾಯಿತು. ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಗುರುಸಿದ್ಧ ಸ್ವಾಮೀಜಿ, ಮನಿಷಾ ಸುಬೇದಾರ, ಗುರುಬಸಪ್ಪಣ್ಣ ಚೊಣ್ಣದ, ಗೂಳಪ್ಪ ಹೊಸಮನಿ, ಡಾ.ಗುರುದೇವಿ ಹುಲೆಪ್ಪನವರಮಠ, ಡಾ.ಮಹೇಶ ಗುರನಗೌಡರ ಇತರರಿದ್ದರು. 
ಜಿಲ್ಲೆ

ಬೆಳಗಾವಿ: ನೊಂದವರ ನೋವಿಗೆ ಸ್ಪಂದನೆ ಅಗತ್ಯ

ಬೆಳಗಾವಿ: ಅಂಗವಿಕಲರು, ಅಂಧರು, ವೃದ್ಧರು, ಎಚ್‌ಐವಿ ಪೀಡಿತ ಮಕ್ಕಳು ಹಾಗೂ ಅನಾಥ ಮಕ್ಕಳಿಗೆ ಜೀವನೋಪಾಯ ಸಾಮಗ್ರಿ ವಿತರಿಸುವ ಮೂಲಕ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವ ಶಹಾಪುರದ ದಾನಮ್ಮದೇವಿ ಟ್ರಸ್ಟ್ ಕಾರ್ಯ ಶ್ಲಾಘನೀಯ ಹಾಗೂ ಸರ್ಕಾರಕ್ಕೂ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

ನಗರದ ಶಹಾಪುರದ ದಾನಮ್ಮದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಹಾಗೂ ಸಾಮಗ್ರಿ ವಿತರಣೆ ಸಮಾರಂಭದಲ್ಲಿ ಮಾತನಾಡಿ, ನೊಂದವರ ನೋವಿಗೆ ಸ್ಪಂದಿಸುವ ಕಾರ್ಯ ಅತೀ ಅಗತ್ಯವಾಗಿದೆ ಎಂದರು.

ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಶರಣರು ಸಮಾಜವನ್ನು ವೈಚಾರಿಕ ನೆಲೆಯಲ್ಲಿ ನೋಡಲು ಇಚ್ಛಿಸಿ, ಅದರಂತೆಯೇ ನಡೆದರು. ಅವರ ವಿಚಾರಗಳನ್ನು ಈ ಟ್ರಸ್ಟ್‌ನ ರೀತಿ ಪ್ರತಿಯೊಬ್ಬರೂ ಅನುಸರಿಸಿದರೆ ಸಮಾಜ ಹಾಗೂ ಧರ್ಮಕ್ಕೆ ಅರ್ಥ ಬರುತ್ತದೆ ಎಂದರು. ದಾನಿ ಹಾಗೂ ನಿವೃತ್ತ ಶಿಕ್ಷಕ ಆರ್.ಎಂ.ಕರಡಿಗುದ್ದಿ, ಶೋಭಾ ಎಸ್.ಹತ್ತರಕಿ, ಮನಿಷಾ ಸುಬೇದಾರ ಅವರನ್ನು ಸತ್ಕರಿಸಲಾಯಿತು. ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂದಿರ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಎಸ್.ಬೆಂಬಳಗಿ, ಪತ್ರಕರ್ತೆ ಮನಿಷಾ ಸುಬೇದಾರ, ಗುರುಬಸಪ್ಪಣ್ಣ ಚೊಣ್ಣದ, ಬುಡಾ ಚೇರ್ಮನ್ ಗೂಳಪ್ಪ ಹೊಸಮನಿ, ಡಾ.ಗುರುದೇವಿ ಹುಲೆಪ್ಪನವರಮಠ, ಡಾ.ಮಹೇಶ ಗುರನಗೌಡರ ಇತರರು ಇದ್ದರು.