ಜಿಲ್ಲೆ

ಚುನಾವಣೆ ಬಳಿಕ ಎಲ್ಲೋಗ್ತಾರೋ!

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ: ಪುತ್ರನ ಪರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮಳೂರು ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತಭೇಟೆ ನಡೆಸಿದ ಅವರಿಗೆ ಹಲವು ಭಾಜಪ ನಾಯಕರು ಸಾಥ್ ನೀಡಿದರು.

ಕೂಡ್ಲೂರು, ಮಳೂರು ಪಟ್ಟಣ ಹಾಗೂ ಚೆಕ್ಕರೆ ಗ್ರಾಪಂ ಸೇರಿ ಹಲವು ಗ್ರಾಮಗಳಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ನಡೆಸಿದ ಎಚ್.ಡಿ.ಕೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಡಾ.ಸಿ.ಎನ್.ಮಂಜುನಾಥ್ ಸೇರಿ ಹಲವು ಬಿಜೆಪಿ ನಾಯಕರು ಕೈಜೋಡಿಸಿದರು.

ನಿಖಿಲ್ ಈ ಮಣ್ಣಿನ ಮಗ!!

ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಪುತ್ರನ ಪರ ಮಾತಯಾಚಿಸಿ ಮಾತನಾಡಿದ ಕುಮಾರಸ್ವಾಮಿ,

ಕಾಂಗ್ರೆಸ್‌ನವರು ನನ್ನನ್ನು ಹೊರಗಿನವನು ಅಂತಾರೆ. ನಾನು ಹುಟ್ಟಿದ್ದು ಹಾಸನದಲ್ಲಿ. ಆದರೆ, ಬೆಳಿಸಿದ್ದು ರಾಮನಗರ ಜನ. ನಾನು ಕೊನೆಗೆ ಭೂಮಿಗೆ ಹೋಗೊದು ಈ ಮಣ್ಣಿನಲ್ಲಿಯೇ. ನಿಖಿಲ್ ಕೂಡ ಈ ಮಣ್ಣಿನ ಮಗನೇ. ಆತನಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನಿಮ್ಮ ಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಪಕ್ಷಾಂತರ ಮಾಡಿದ್ದಾರೆ. ಅವರಿಗಿಂತ ಹೆಚ್ಚು ಈ ಗ್ರಾಮದಲ್ಲಿ ನಾವು ಅಭಿವೃದ್ಧಿ ಮಾಡಿದ್ದೇನೆ. ಹುಟ್ಟಿದ ಊರನ್ನೇ ಅಭಿವೃದ್ಧಿ ಮಾಡದವರು ತಾಲೂಕನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ. ಯೋಗೇಶ್ವರ್ ಈ ಹಿಂದೆ ಡಿಕೆ ಬ್ರದರ್ಸ್‌ಗೆ ಬೈದುಕೊಂಡು ಓಡಾಡಿದ್ದರು. ಆದರೆ, ಈಗ ಅವರನ್ನೇ ತಬ್ಬಿಕೊಂಡಿದ್ದಾರೆ. ಈ ತಾಲೂಕಿಗೆ ಅವರು 20ವರ್ಷ ಶಾಸಕರಾಗಿ ಏನು ಮಾಡಿದ್ದಾರೆ. ನಾನು 5 ವರ್ಷದಲ್ಲಿ ಏನು ಮಾಡಿದ್ದೇನೆ ಯೋಚನೆ ಮಾಡಿ. ನೀವು ಯಾರಿಗೂ ಹೆದರದೆ ಚುನಾವಣೆ ಮಾಡಿ. ಈಗ ಕಾಂಗ್ರೆಸ್‌ನಲ್ಲಿರುವ ಅಭ್ಯರ್ಥಿ ಚುನಾವಣೆ ಬಳಿಕ ಎಲ್ಲಿ ಹೋಗ್ತಾರೋ ಗೊತ್ತಿಲ್ಲ ಎಂದು ಛೇಡಿಸಿದರು.

ರಾಮನಗರಲ್ಲಿ ಕಾಂಗ್ರೆಸ್ ನವರು ಕೂಪನ್ ಹಂಚಿಕೊಂಡು ಚುನಾವಣೆ ಮಾಡಿದರು. ಚನ್ನಪಟ್ಟಣದಲ್ಲೂ ಆ ಕೆಲಸ ಆಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಮತ ನೀಡಿ ಎಂದು ಮನವಿ ಮಾಡಿದರು.

ಚನ್ನಪಟ್ಟಣಕ್ಕೂ ವಕ್ಫ್ ಕಂಟಕ

ವಕ್ಫ್ ಬಾಹುಗಳು ಎಲ್ಲೆಡೆ ಚಾಚಿಕೊಳ್ಳುತ್ತಿದ್ದು, ನಿಮ್ಮ ಚನ್ನಪಟ್ಟಣಕ್ಕೂ ಬಂದಿದೆ. ರೈತರು ಕೂಡಲೇ ತಾಲೂಕು ಕಚೇರಿಗೆ ಹೋಗಿ ಭೂ ದಾಖಲೆ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಮಾತನಾಡಿ, ವಕ್ಫ್ ಮಾರಿ ನಿಮ್ಮ ಚನ್ನಪಟ್ಟಣಕ್ಕೂ ವಕ್ಕರಿಸಿದೆ. ತಾಲೂಕಿನ ಯಲಿಯೂರು ಬಳಿ ಹಿಂದುಗಳ ಸ್ಮಶಾನಕ್ಕೂ ಅದರ ಕಣ್ಣು ಬಿದ್ದಿದೆ ಎಂದು ಕಿಡಿಕಾರಿದರು.

ರೈತರ ಜಮೀನು, ದೇವಸ್ಥಾನ ಅಂತ ನೋಡಲ್ಲ. ಜಮೀರ್ ಅಹಮದ್ ಬಂದಮೇಲೆ ಜಿಲ್ಲಾಧಿಕಾರಿ ಹೆದರಿಸಿ ಆರ್‌ಟಿಸಿ ವಕ್ಫ್ ಅಂತ ಬರೆಸುತ್ತಿದ್ದಾರೆ. ಮುಸ್ಲಿಂರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಹೀಗೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಒಂದು ರೂಪಾಯಿ ಕೊಟ್ಟಿಲ್ಲ.ದಲಿತರ ಹಣ ನುಂಗಿ ನೀರು ದುಡಿದಿದ್ದಾರೆ. ಸಿದ್ದರಾಮಯ್ಯ ಸೈಟ್ ಲೂಟಿ ಮಾಡಿದ್ದಾರೆ. ದಲಿತರಿಗೆ ಒಂದು ಸೈಟ್ ಕೊಟ್ಟಿಲ್ಲ. ರೈತರ ಭೂಮಿ, ಸರ್ಕಾರಿ ಜಾಗ, ದೇವಾಲುಗಳು ವಕ್ಫ್ ಬೋರ್ಡ್‌ಗೆ ಸೇರಿಸಿದ್ದಾರೆ. ಕುಮಾರಣ್ಣ ಬೆಳೆಸಿದ ಜಮೀರ್ ನಿಮ್ಮ ಆಸ್ತಿ ಕಸಿದು ಚೋಡೊ, ಚೋಡೊ ಅಂತಾನೆ.

ಇದನ್ನ ಜನ ಅರ್ಥ ಮಾಡಿಕೊಳ್ಳಿ. ಇದು ಕೇವಲ ಚುನಾವಣೆ ಅಲ್ಲ, ದೇಶದ ಭವಿಷ್ಯ. ಹಾಗಾಗಿ ನಿಮ್ಮ ಮಕ್ಕಳ ಭವಿಷ್ಯ, ದೇಶದ ಭವಿಷ್ಯಕ್ಕಾಗಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.