ಜಿಲ್ಲೆ

ತಂತ್ರಜ್ಞಾನ ಯುಗ ಕತ್ತೆಯೇ ಗತಿ: ಇಂಡಿಗನತ್ತ, ತೇಕಾಣೆ, ತುಳಸಿಕೆರೆ, ಪಡಸಲನತ್ತ ಮತ್ತು ನಾಗಮಲೆ ಹಾದಿ ಸಂಕಷ್ಟ

ಮೈಸೂರು: ತಂತ್ರಜ್ಞಾನ ಯುಗಕ್ಕೆ ಮನುಷ್ಯ ಕಾಲಿಟ್ಟಿದ್ದರೂ ಮಲೆ ಮಹದೇಶ್ವರ ಬೆಟ್ಟ ಸಮೀಪದ ಕೆಲವು ಗ್ರಾಮಗಳ ಜನರು ‘ಕತ್ತೆಯ ಕಾಲು ಹಿಡಿಯುವುದು’ ತಪ್ಪಿಲ್ಲ..!

ಮೋಟಾರು ವಾಹನಗಳು ಇಲ್ಲದ ಕಾಲದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಕು-ಸಾಮಗ್ರಿಗಳನ್ನು ಸಾಗಣೆ ಮಾಡಲು ಜನರು ಬಂಡಿಗಳನ್ನು ಬಳಸುತ್ತಿದ್ದರು. ಈ ಬಂಡಿಗಳು ಸಂಚರಿಸಲು ಅಗತ್ಯವಾದ ರಸ್ತೆ ಇಲ್ಲದ

ಪ್ರದೇಶಗಳಲ್ಲಿ ಕತ್ತೆಗಳನ್ನು ಬಳಸು ವುದು ಸಾಮಾನ್ಯವಾಗಿತ್ತು. ಆದರೆ, ಪ್ರಸ್ತುತ ನಾಗರಿಕ ಪ್ರಪಂಚಕ್ಕೆ ಒಂದಲ್ಲ, ಎರಡಲ್ಲ ನೂರಾರು ಮಾದರಿಯ ವಾಹನ ಗಳು ಬಂದಿವೆ. ಸಂದಿಗೊಂದಿ ಸ್ಥಳಗಳೂ ರಸ್ತೆಗಳಾಗಿ ಮಾರ್ಪಟ್ಟಿವೆ. ಇಷ್ಟಾದರೂ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ವಾಸವಾಗಿರುವ ಜನರು, ಸರಕು-ಸಾಮಗ್ರಿಗಳ ಸಾಗಣೆಗಾಗಿ ಈಗಲೂ ಕತ್ತೆಗಳನ್ನು ಅವಲಂಬಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಇಂಡಿಗನತ್ತ, ತೇಕಾಣೆ, ತುಳಸಿಕೆರೆ, ಪಡಸಲನತ್ತ ಮತ್ತು ನಾಗಮಲೆ ತಪ್ಪಲಿನಲ್ಲಿ ವಾಸಿಸುತ್ತಿರುವ ಜನರೆದುರು ಒಂದು ವೇಳೆ ಆ ಮಹದೇಶ್ವರರೇ ಪ್ರತ್ಯಕ್ಷನಾದರೆ ರಸ್ತೆ ಬೇಕೆಂಬ ವರ ಬಿಟ್ಟು ಬೇರೇನನ್ನೂ ಕೇಳಲಾರರು! ಅಂತಹ ಪರಿಸ್ಥಿತಿ ಇಲ್ಲಿದೆ.

ಕತ್ತೆಗೆ 150 ರೂಪಾಯಿ ಬಾಡಿಗೆ

ಕತ್ತೆಗಳನ್ನು ಎಲ್ಲರೂ ಸಾಕುವುದಿಲ್ಲ. ಅದಕ್ಕಾಗಿಯೇ ಕೆಲವು ಕುಟುಂಬಗಳಿದ್ದು, ಒಂದು ಬಾರಿ ಮಹದೇಶ್ವರ ಬೆಟ್ಟಕ್ಕೆ ಹೋಗಿ, ಸರಕು-ಸಾಮಗ್ರಿ ಹೇರಿಕೊಂಡು ಬರಲು ಒಂದು ಕತ್ತೆಗೆ 150 ರೂ. ಬಾಡಿಗೆ ನಿಗದಿ ಮಾಡಿದ್ದಾರೆ. ಗರಿಷ್ಠ 50 ಕೆ.ಜಿ. ಭಾರವನ್ನು ಕತ್ತೆಗೆ ಹೇರಬಹುದು. ನಾಗಮಲೆಯಲ್ಲಿ ತೆರೆಯಲಾಗಿರುವ ಪೂಜಾ ಸಾಮಗ್ರಿ, ಹೋಟೆಲ್ ಮತ್ತಿತರ ಅಂಗಡಿಗಳ ಮಾಲೀಕರು ಮಾರಲು ಬೇಕಾದ ಸಾಮಗ್ರಿಗಳನ್ನು ಮಹದೇಶ್ವರ ಬೆಟ್ಟದಿಂದ ತರಲು ಈ ಕತ್ತೆಗಳನ್ನೇ ಅವಲಂಬಿಸಿದ್ದಾರೆ.

ಕಾರಣವೇನು?

ಮಲೆ ಮಹದೇಶ್ವರ ನೆಲೆಸಿರುವ ‘ನಡುಮಲೆ’ಯ (ಮಹದೇಶ್ವರಬೆಟ್ಟ) ಸುತ್ತಮುತ್ತ ಎಪ್ಪತ್ತೇಳು ಮಲೆ (ಬೆಟ್ಟ)ಗಳಿವೆ. ಈ ಪೈಕಿ ‘ನಾಗಮಲೆ’ ಪ್ರಮುಖ ಯಾತ್ರಾ ಸ್ಥಳವಾಗಿದೆ. ನಡುಮಲೆಯಿಂದ ನಾಗಮಲೆಗೆ 14 ಕಿ.ಮೀ. ಇದ್ದು, ಕಾಡು ಮತ್ತು ಬೆಟ್ಟಗುಡ್ಡಗಳ ಮಾರ್ಗದಲ್ಲಿ ಸಾಗಬೇಕು. ನಡುಮಲೆಯಿಂದ ಇಂಡಿಗನತ್ತ ಗ್ರಾಮ (7 ಕಿ.ಮೀ.)ವರೆಗೆ ಕೊರಕಲು ರಸ್ತೆಯಿದ್ದು, ಜೀಪುಗಳು ಮಾತ್ರ ಸಂಚರಿಸುತ್ತವೆ. ಉಳಿದ 7 ಕಿ.ಮೀ. ನಾಗಮಲೆವರೆಗೆ ಬೆಟ್ಟಗುಡ್ಡಗಳನ್ನು ಹತ್ತಿ-ಇಳಿದು, ಸುತ್ತಿ-ಬಳಸಿ, ಕಲ್ಲು-ಮಣ್ಣಿನ ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಬೇಕು. ಪಡಸಲನತ್ತ ಮತ್ತು ನಾಗಮಲೆ ನಿವಾಸಿಗಳು ಅಕ್ಕಿ, ದಿನಸಿ ಪದಾರ್ಥಗಳು, ಮನೆಗಳ ನಿರ್ವಣಕ್ಕೆ ಅಗತ್ಯವಾದ ಸಿಮೆಂಟು, ಇಟ್ಟಿಗೆ ಇನ್ನಿತರ ಸಾಮಗ್ರಿಗಳನ್ನು ಮಹದೇಶ್ವರ ಬೆಟ್ಟದಿಂದಲೇ ತರಬೇಕು. ಅದಕ್ಕಾಗಿ ಕತ್ತೆಗಳೇ ಇವರ ಸರಕು ವಾಹನಗಳಾಗಿವೆ.

ಈ ಕಷ್ಟ ನಮಗೆ ತಪ್ಪಿದ್ದಲ್ಲ ಸಾಮಿ...

ಮಹದೇಶ್ವರ ಬೆಟ್ಟದಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಇಲ್ಲಿನ ಜನರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ. ಜನವರಿ ಪಡಿತರ ಪಡೆದು ತಲೆಯ ಮೇಲೆ ಹೊತ್ತು ಊರಿನತ್ತ ತೆರಳುತ್ತಿದ್ದ ಮಾದಮ್ಮ, ‘ಈ ಕಷ್ಟ ನಮ್ಗೆ ಪ್ರತಿ ತಿಂಗ್ಳು ತಪ್ಪಿದ್ದಲ್ಲ ಸಾಮಿ, ಇನ್ನೇನು ಮಾಡೋದು ಹೇಳಿ? ಈ ಸಂಕ್ಟವ ಆ ಮಾದೇಶ್ವರ ನಮ್ಗೆ ಅದ್ಯಾವಾಗ ತಪ್ಪಿಸ್ತಾನೋ ನೋಡ್ಬೇಕು’ ಎಂದು ಅಳಲು ತೋಡಿಕೊಂಡರು.

ನಮ್ಮೂರಿನಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ಚಿಕಿತ್ಸೆಗಾಗಿ ಮಹದೇಶ್ವರ ಬೆಟ್ಟಕ್ಕೆ ನಡೆದುಕೊಂಡೇ ಹೋಗಬೇಕು. ಗರ್ಭಿಣಿ, ಬಾಣಂತಿಯರು ಸೇರಿದಂತೆ ತುರ್ತು ಚಿಕಿತ್ಸೆಯ ಅಗತ್ಯವಿದ್ದವರನ್ನು ಮೇನೆಯಲ್ಲಿ ಹೊತ್ತೊಯ್ಯಬೇಕು. | ನಾಗಪ್ಪ ತಮ್ಮಡಿ ನಾಗಮಲೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಮ್ಮ ಊರುಗಳತ್ತ ತಲೆಯನ್ನೇ ಹಾಕುವುದಿಲ್ಲ. ಹೀಗಾಗಿ, ಕಳೆದ ತಿಂಗಳು ನಡೆದ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಿದೆವು. | ನಾಗಣ್ಣ ನಾಗಮಲೆ ನಿವಾಸಿ ಇಂಡಿಗನತ್ತ ಗ್ರಾಮದಿಂದ ನಾಗಮಲೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲು ಅರಣ್ಯ ಕಾನೂನು ಗಳು ಅಡ್ಡಿಯಾಗಿವೆ. ಆದಾಗ್ಯೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್​ಕುಮಾರ್ ಅವ ರನ್ನು ಸ್ಥಳಕ್ಕೆ ಕರೆದೊಯ್ದು ವಸ್ತುಸ್ಥಿತಿ ಮನವರಿಕೆ ಮಾಡಲಾಗಿದೆ. ಲಘು ವಾಹನಗಳು ಸಂಚರಿಸುವಷ್ಟು ಮಟ್ಟಿಗಾದರೂ ರಸ್ತೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. | ಆರ್.ನರೇಂದ್ರ ಸ್ಥಳೀಯ ಶಾಸಕ