ಜಿಲ್ಲೆ

ನನ್ಗೆ ತೊಂದ್ರೆ ಕೊಡೋದೇ ಕೆಲವ್ರಿಗೆ ಖುಷಿ ಎಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್

malli

ಕಲಬುರಗಿ: ಕೆಪಿಸಿಸಿಗೆ ಹೊಸ ಸಾರಥಿ ವಿಚಾರ ಹಾದಿ-ಬೀದಿಯಲ್ಲಿ ಮಾತನಾಡೋ ಪೋಸ್ಟ್ ಅಲ್ಲ. ಹಾಗೆ ಮಾತನಾಡಲು ಬರಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಗುರುವಾರ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ತ್ರಿಮೂರ್ತಿರೂಪ ದತ್ತಾತ್ರೇಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ದತ್ತ ಪಾರಾಯಣ ಮುಗಿಸಿ, ನಗರಕ್ಕೆ ಆಗಮಿಸಿದ ಅವರು ಬೆಂಗಳೂರಿಗೆ ತೆರಳುವ ಮುನ್ನ ಪತ್ರಕರ್ತರ ಜತೆ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷಗಾದಿಗೆ ಯಾರಾದರೂ ಅಸಮಾಧಾನ ವ್ಯಕ್ತಪಡಿಸಿದ್ದರೆ ಅವರನ್ನೆ ಕೇಳಿ. ನನ್ನನ್ನು ಯಾಕೆ ಕೇಳುತ್ತೀರಿ ಎನ್ನುವ ಮೂಲಕ ಎಂ.ಬಿ.ಪಾಟೀಲ್ ಇತರರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.

ಇತ್ತೀಚೆಗೆ ಇಡಿಯವರು ಬಂಧಿಸಿದಾಗ ನನ್ನ ಪರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಆಸ್ತಿ ಹಾನಿಯಾಗಿರುವ ಬಗ್ಗೆ ಯಾರು ಕೋರ್ಟ್​ನಲ್ಲಿ ಪಿಐಎಲ್ ಹಾಕಿಸಿದ್ದಾರೆ? ಯಾವ ಪಾರ್ಟಿ? ಯಾವ ವ್ಯಕ್ತಿ ಅದರ ಹಿಂದೆ ಇದ್ದಾರೆ ಎಂಬಿತ್ಯಾದಿ ವಿಚಾರಗಳು ಗೊತ್ತಿವೆ.

ಪಿಐಎಲ್ ಹಾಕಿಸಿ ಹಾನಿ ಬಗ್ಗೆ ಇಷ್ಟೊಂದು ಬೇಗ ವರದಿ ಕೊಟ್ಟಿರುವುದರಲ್ಲಿ ರಾಜಕಾರಣ ಎದ್ದು ಕಾಣುತ್ತಿದೆ. ನನಗೆ ಯಾವುದೇ ಸಂಕಷ್ಟವಿಲ್ಲ, ನನಗೆ ತೊಂದರೆ ಕೊಡುವುದು ಕೆಲವರಿಗೆ ಖುಷಿ ಕೊಡುತ್ತಿರುವಂತಿದೆ. ಹೀಗಾಗಿ ಅವರು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಧರ್ಮ ದೇವರು, ಹಿಂದುತ್ವ ಯಾರ ಆಸ್ತಿಯಲ್ಲ. ಆದ್ರೆ ಅದನ್ನು ಕೆಲವರು ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.