ಮೈಸೂರು: ಕುರುಬಾರಹಳ್ಳಿ, ಆಲನಹಳ್ಳಿ ಹಾಗೂ ಚೌಡಳ್ಳಿಯಲ್ಲಿ ಮೈಸೂರು ರಾಜಮನೆತನಕ್ಕೆ ಸೇರಿದ ಜಾಗಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ಕೊಡಿಸುತ್ತೇವೆ ಎಂದು ಕೆಲವರು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಮನವಿ ಮಾಡಿದ್ದಾರೆ.
ಕುರುಬರಹಳ್ಳಿಯ ಸರ್ವೆ ನಂ. 4, ಆಲನಹಳ್ಳಿಯ ಸರ್ವೆ ನಂ.41 ಮತ್ತು ಚೌಡಹಳ್ಳಿಯ ಸರ್ವೆ ನಂ.39ರ ಜಾಗ ಸಂಬಂಧಿಸಿದಂತೆ ಕೆಲವರು ಸುಳ್ಳು ಹೇಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂತಹ ವ್ಯಕ್ತಿಗಳಿಗೆ ಯಾವುದೇ ರೀತಿಯ ಹಣ ಪಾವತಿ ಮಾಡಬಾರದು ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಮೇಲೆ ತಿಳಿಸಿದ ಸರ್ವೆ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಎನ್‌ಒಸಿಗಳನ್ನು ನೀಡಲು ಅಧಿಕಾರವಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಅಂತಹ ಯಾವುದೇ ಹಕ್ಕುಗಳು ಕಾನೂನುಬಾಹಿರವಾಗಿದ್ದು, ಸಾರ್ವಜನಿಕರನ್ನು ವಂಚಿಸುವ ಉದ್ದೇಶ ಹೊಂದಿವೆ. ಈ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.