ಬೆಂಗಳೂರು: ಬಿಬಿಎಂಪಿಯ ‘ಗುಣ ನಿಯಂತ್ರಣ ಪ್ರಯೋಗಾಲಯ ಕಚೇರಿ’ಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಗಾಯಾಳುಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಕೆಲವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುವ ಸಾಧ್ಯತೆಯಿದೆ.
ಕೇಂದ್ರ ಕಚೇರಿ ಆವರಣದ ‘ಗುಣ ನಿಯಂತ್ರಣ ಪ್ರಯೋಗಾಲಯ ಕಚೇರಿಯಲ್ಲಿ ಆ.11ರಂದು ಬೆಂಕಿ ದುರಂತ ಪರಿಣಾಮ ಮುಖ್ಯ ಅಭಿಯಂತರ ಶಿವಕುಮಾರ್,ಕಾರ್ಯಪಾಲಕ ಅಭಿಯಂತರರಾದ ಕಿರಣ್,ಸಂತೋಷ್ ಕುಮಾರ್, ವಿಜಯಮಾಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್, ಗಣಕಯಂತ್ರ ನಿರ್ವಾಹಕ ಮನೋಜ್,ಪ್ರಥಮ ದರ್ಜೆ ಸಹಾಯಕ ಸಿರಾಜ್ ಹಾಗೂ ಆಪರೇಟರ್ ಜ್ಯೋತಿ ಸೇರಿ 9 ಮಂದಿ ಸುಟ್ಟಗಾಯದಿಂದ ವಿಕ್ಟೋರಿಯಾ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ ವಿಭಾಗದಲ್ಲಿ ದಾಖಲಾಗಿದ್ದು, ಅಂದಿನಿಂದ ಇಂದಿನವರೆಗೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಕಿರಣ್‌ಗೆ 6ನೇ ಬಾರಿ ಡಯಾಲೀಸಿಸ್ ಮಾಡಲಾಗಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಜ್ಯೋತಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.ಶಿವಕುಮಾರ್‌ಗೆ ಇನ್ನಷ್ಟು ಹೆಚ್ಚಿನ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಕೋಟ್:
ಅಗ್ನಿ ದುರುಂತದಲ್ಲಿ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರು ಗುಣಮುಖರಾಗುವ ನಿರೀಕ್ಷೆ ಇದೆ. ಕೆಲವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೇರೆ ಕಡೆ ದಾಖಲಿಸಲು ನಾವು ಸಿದ್ಧವಾಗಿದ್ದೇವೆ. ರೋಗಿಗಳ ಆರೋಗ್ಯ ವಿಚಾರ ಸಂಬಂಧಪಟ್ಟಂತೆ ವೈದ್ಯರ ಜತೆ ಪ್ರತಿ ನಿತ್ಯ ಸಂಪರ್ಕದಲ್ಲಿ ಇದ್ದೇವೆ. ಏನಾದರೂ ರೋಗಿಗಳ ಆರೋಗ್ಯದಲ್ಲಿ ಏರುಪೇರು ಆದರೂ ಒಳ್ಳೆಯ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇರುವುದಾಗಿ ವೈದ್ಯರು ಹೇಳಿದ್ದಾರೆ.ರೋಗಿಗಳು ಹಾಗೂ ಅವರ ಸಂಬಂಧಿಕರು ಆತಂಕಗೊಳ್ಳುವ ಆಗತ್ಯವಿಲ್ಲ.
ತುಷಾರ್ ಗಿರಿನಾಥ್. ಬಿಬಿಎಂಪಿ ಮುಖ್ಯ ಆಯುಕ್ತ