ಜಿಲ್ಲೆ

ಬ್ಯಾಂಕ್, ವಲ್ಲಭಭಾಯಿ ರಸ್ತೆ ಸೀಲ್‌ಡೌನ್

Kodagu

ಸೋಮವಾರಪೇಟೆ : ಪಟ್ಟಣದಲ್ಲಿ ಶನಿವಾರ ಮೂರು ಜನರಿಗೆ ಕರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಾನುವಾರ ಬ್ಯಾಂಕ್ ಕಟ್ಟಡ, ವಲ್ಲಭಭಾಯಿ ರಸ್ತೆ ಹಾಗೂ ಹಳ್ಳ ದಿಣ್ಣೆ ಗ್ರಾಮವನ್ನು ಸೀಲ್‌ಡೌನ್ ಮಾಡಲಾಯಿತು.
ಕರೊನಾ ಭೀತಿ ಹಿನ್ನೆಲೆ ಪಟ್ಟಣದಲ್ಲಿ ಕಳೆದ ವಾರ ಸವಿತಾ ಸಮಾಜದವರು ಅಂಗಡಿಗಳನ್ನು ಮುಚ್ಚಿ ಎರಡು ದಿನಗಳ ಹಿಂದೆಯಷ್ಟೇ ತೆರೆದಿದ್ದರು. ಆದರೀಗ ಮತ್ತೆ ಮೂವರಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪಟ್ಟಣದಲ್ಲಿ ಕ್ಷೌರದ ಅಂಗಡಿಗಳನ್ನು ಜು. 28ರ ತನಕ ಮುಚ್ಚಲು ಭಾನುವಾರ ನಡೆದ ಸವಿತಾ ಸಮಾಜದ ಸಂಘದ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಸಂಘದ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದ್ದಾರೆ.
ಕಳೆದ ಮೂರು ವಾರಗಳಿಂದ ಸೋಮವಾರದ ಸಂತೆಯನ್ನು ಜಿಲ್ಲಾಡಳಿತ ರದ್ದುಗೊಳಿಸಿತ್ತು. ಇದೀಗ ಜುಲೈ ತಿಂಗಳ ಅಂತ್ಯದವರೆಗೆ ಮುಂದೂಡಲಾಗಿದೆ. ಮಾರುಕಟ್ಟೆ ಆವರಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಮಾರುಕಟ್ಟೆಗೆ ವ್ಯಾಪಾರಿಗಳು ಬರುವಂತಿಲ್ಲ. ಆದೇಶ ಮೀರಿ ಅಂಗಡಿ ಹಾಕಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.
ಭಯದಲ್ಲಿ ಜನರು: ಪಟ್ಟಣದಲ್ಲಿ ಶನಿವಾರ ಮೂರು ಜನರಿಗೆ ಕರೊನಾ ದೃಢಪಟ್ಟಿರುವ ಹಿನ್ನೆಲೆ ಜನರು ಭಯಭೀತರಾಗಿದ್ದಾರೆ. ಬಳಗುಂದ ಗ್ರಾಮದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಜತೆಗೆ ಬ್ಯಾಂಕ್‌ಗೆ ಬಂದಿದ್ದ ಗ್ರಾಹಕರೊಬ್ಬರಿಗೆ ಕರೊನಾ ಪಾಸಿಟಿವ್ ಬಂದ ಕಾರಣ 9 ದಿನಗಳ ಹಿಂದೆಯೇ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಲ್ಯಾಬ್ ಪರೀಕ್ಷೆಗೆ ನೀಡಿದ್ದರು. ಇದೀಗ 9 ದಿನಗಳ ನಂತರ ಶನಿವಾರ ರಿಪೋರ್ಟ್ ಬಂದಿದ್ದು, ಇಬ್ಬರಿಗೆ ಪಾಸಿಟಿವ್ ಬಂದಿದೆ.ಹೀಗಾಗಿ ಬ್ಯಾಂಕ್ ಸಿಬ್ಬಂದಿ ಕಾರ್ಯ ನಿಮಿತ್ತ ಪಟ್ಟಣದೆಲ್ಲೆಡೆ ಓಡಾಡಿದ್ದಾರೆ. ಅಲ್ಲದೆ ಅದೇ ಬ್ಯಾಂಕ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಮೂವರು ಪಿಗ್ಮಿ ನೌಕರರು ಪಟ್ಟಣದೆಲ್ಲೆಡೆ ಹಣ ಸಂಗ್ರಹಿಸಿದ್ದಾರೆ. ಇದರಿಂದಾಗಿ ಜನತೆ ಭಯಗೊಂಡಿದ್ದಾರೆ.