ಜಿಲ್ಲೆ

ಸೋಮಾರಿತನ ಕರುಣಿಸಿದ ಸಿದ್ದರಾಮಯ್ಯ ; ಸಂಸದ ಜಿ.ಎಸ್.ಬಸವರಾಜು ಹೇಳಿಕೆ ; ಮೋದಿ ದುಡಿಮೆ ಮಾರ್ಗ ತೋರಿಸಿದರು

Tumakuru

ಗುಬ್ಬಿ : ಬಡ ಜನರಿಗೆ ಅಕ್ಕಿ ನೀಡುವ ಬದಲು, ದುಡಿಮೆ ಮಾರ್ಗ ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆ ರೂಪಿಸಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಉಚಿತ ಅಕ್ಕಿ ನೀಡುವ ಪ್ರಸ್ತಾಪ ಮಾಡಿ, ದುಡಿಯುವ ಕೈಗಳಿಗೆ ಸೋಮಾರಿತನ ಕರುಣಿಸಿದರು ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ನಿಟ್ಟೂರು ಹೋಬಳಿ ಮತ್ತಿಕೆರೆ ಗೇಟ್ ಬಳಿ ಗುರುವಾರ ವಿಶೇಷ ಅನುದಾನ 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಮರಿಯಮ್ಮ ದೇವಸ್ಥಾನ ಆವರಣಕ್ಕೆ ಸಿಸಿ ರಸ್ತೆ, ತಿಮ್ಮಪ್ಪನಹಟ್ಟಿ, ಮತ್ತಿಕೆರೆ, ಹೊಸಹಳ್ಳಿ, ಬಸವಾಪಟ್ಟಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಬಾರಿ ಜಿಲ್ಲೆಯಲ್ಲಿ ಹರಿದ ಹೇಮೆ ರೈತರಿಗೆ ಅನುವಾಗಿದೆ. ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಅವಶ್ಯ ಉಪಸ್ಥಾವರ ನಿರ್ಮಿಸಿದಲ್ಲಿ ರೈತ ವರ್ಗಕ್ಕೆ ಉಚಿತ ಅಕ್ಕಿ ಬೇಕಿಲ್ಲ ಎಂದರು.

ತಾಲೂಕಿನಲ್ಲಿ 34 ವಿದ್ಯುತ್ ಸ್ಟೇಷನ್ ನಿರ್ಮಿಸಲಾಗಿದೆ. ಇದರೊಟ್ಟಿಗೆ ಕಡಬ ಕೆರೆಗೆ 21 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು, ನೀರು ಸರಾಗವಾಗಿ ಹರಿಯಲಿದೆ. ಕೇಂದ್ರ ಸರ್ಕಾರದಿಂದ ಜಿಲ್ಲೆಯ 8 ತಾಲೂಕಿಗೆ 487 ಕೋಟಿ ರೂಪಾಯಿ ಅನುದಾನ ಬಂದಿದ್ದು, ಈ ಪೈಕಿ ಗುಬ್ಬಿ ತಾಲೂಕಿಗೆ 86 ಕೋಟಿ ರೂಪಾಯಿ ವೆಚ್ಚದ ಕೆಲಸ ವಿವಿಧ ಗ್ರಾಮಗಳನ್ನು ಸಂಪರ್ಕಿಸಲಿದೆ. ಹೇವಾವತಿ ನಾಲೆ ವಿಸ್ತರಣೆಗೆ ಈ ಹಿಂದೆ 550 ಕೋಟಿ ರೂಪಾಯಿ ನೀಡಲಾಗಿತ್ತು. ಮತ್ತೊಮ್ಮೆ ಈ ಕೆಲಸಕ್ಕೆ 460 ಕೋಟಿ ರೂಪಾಯಿ ನೀಡಿದ್ದರಿಂದ 1400 ಕ್ಯೂಸೆಕ್ಸ್ ನೀರು ಸರಾಗವಾಗಿ ಹರಿಯಲಿದೆ ಎಂದರು. ಮುಖಂಡರಾದ ಎನ್.ಸಿ.ಪ್ರಕಾಶ್, ಜಿ.ಎನ್.ಬೆಟ್ಟಸ್ವಾಮಿ, ಸಿ.ಎಂ.ಹಿತೇಶ್, ಭವ್ಯ, ಶಶಿಕಲಾ, ಬಿ.ಎಸ್.ಪಂಚಾಕ್ಷರಿ, ಅ.ನ.ಲಿಂಗಪ್ಪ ಇತರರು ಇದ್ದರು.

ಅಭಿವೃದ್ಧಿ ಕೆಲಸಗಳಿಗೆ ರಾಜಕೀಯ ಬೆರೆಸದೆ ಜನಪರ ನಿಲ್ಲಬೇಕು. ಈ ಬಾರಿ ನೀರು ಹರಿಸುವ ವಿಚಾರದಲ್ಲಿ ಯಾವುದೇ ಗೊಂದಲ ಮೂಡಿಸಿಲ್ಲ. ನಿಯಮಾನುಸಾರ ಮೂರು ಜಿಲ್ಲೆಗೆ ನೀರು ಹರಿಸಲಾಗಿದೆ. ಈ ಬಾರಿ ಸಣ್ಣ ಕೆರೆಗಳಿಗೆ ನೀರು ಕೊಟ್ಟು ಹಂಚಿಕೆಗೆ ಒಳಪಡದ ಕೆರೆಗೂ ನೀರು ಕೊಡಲಾಗಿದೆ. ಎತ್ತಿನಹೊಳೆ ಮತ್ತು ಹೇಮೆ ಹರಿಸುವ ವಿಚಾರದಲ್ಲಿ ಅವೈಜ್ಞಾನಿಕ ಎಂಬ ಪದ ಮುಜುಗರ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಬಿಕ್ಕೆಗುಡ್ಡ ಯೋಜನೆಗೆ ಚಾಲ್ತಿ ನೀಡಲಾಗಿದೆ. ಹಾಗಲವಾಡಿ ಕೆರೆಯ ಕಾಮಗಾರಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಹಂಚಿಕೆ ವಿಚಾರದ ಬಗ್ಗೆ ತೀರ್ವಾನ ಮಾಡಲಾಗಿದೆ. ಮೂರು ಕೆರೆಗೆ 36 ಎಂಸಿಟಿಎಫ್ ನೀಡಿರುವುದು ಸರಿ ಎನಿಸಲಿಲ್ಲ. ಈ ನಿಟ್ಟಿನಲ್ಲಿ ಹಂಚಿಕೆ ವಿಚಾರ ಪರಿಶೀಲಿಸಲಾಗುವುದು ಎಂದರು.

ಕಡಬ ಕೆರೆಗೆ ನೀರು ಹರಿಸಿ ಕೋಡಿ ಬೀಳಿಸುವುದು ಸಾಹಸದ ಕೆಲಸವಾಗಿತ್ತು. ಆದರೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಇನ್ನೂ 40 ಕೆರೆಗಳಿಗೆ ನೀರು ಹರಿಯಬೇಕಿದೆ. ಈ ಜತೆಗೆ ಪಂಪ್ ಮೋಟಾರ್ ಮೂಲಕ ನೀರು ಹರಿಯುವ ಕೆರೆಗೆ ದಿನದ 20 ಗಂಟೆ ನೀರು ಹರಿಸಲು ಸೂಚಿಸಿದ್ದೇನೆ. ಜಾತಿ, ಪಕ್ಷ ಎಂಬುದು ನನ್ನ ಬಳಿ ಸುಳಿಯಲ್ಲ. ಕಾನೂನಾತ್ಮಕವಾಗಿ ವಾಡಬಲ್ಲ ಕೆಲಸಗಳನ್ನು ಮಾಡಿದ್ದೇನೆ. ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ