ಜಿಲ್ಲೆ

ಸಹಕಾರ ಮನೋಭಾವದಿಂದ ಸಂಚಾರ ಸಮಸ್ಯೆ ನಿವಾರಣೆ

ಆದರ್ಶ್. ಎಂ.ಕೆ.

ಮಡಿಕೇರಿ: ಮಡಿಕೇರಿಯಲ್ಲಿ ಕಂಡುಬಂದಿರುವ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ನಾಗರಿಕರಲ್ಲಿಯೇ ಇದ್ದು, ಪರಸ್ಪರ ಸಹಕಾರ ಮನೋಭಾವದಿಂದ ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಸಾಧ್ಯವಿದೆ ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಐಮುಡಿಯಂಡ ನಂದ ಅಭಿಪ್ರಾಯಪಟ್ಟರು.


ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ಸಂಸ್ಥೆಯಿಂದ ಇತ್ತೀಚೆಗೆ ಆಯೋಜಿತವಾಗಿದ್ದ ಟ್ರಾಫಿಕ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಡಿಕೇರಿಗೆ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರ ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕಿರಿದಾದ ರಸ್ತೆಗಳಲ್ಲಿ ವಾಹನ ಸಂಚಾರ ಸಮಸ್ಯೆ ಸಾಮಾನ್ಯವಾಗುತ್ತಿದೆ. ಪರಸ್ಪರ ಸಹಕಾರದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂತೆಯೇ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಸ್ಥಳೀಯರು ತಮ್ಮ ವಾಹನಗಳಲ್ಲಿ ಹತ್ತಿರದ ಸ್ಥಳಗಳಿಗೆ ತೆರಳುವುದನ್ನು ಕಡಮೆ ಮಾಡಿದರೆ ಸ್ಥಳೀಯರ ವಾಹನ ಸಂಚಾರ ಪ್ರಮಾಣ ಇಳಿಮುಖವಾಗಿ ಸಂಚಾರ ದಟ್ಟಣೆ ಕಡಮೆಯಾಗಲಿದೆ ಎಂದು ಸಲಹೆ ನೀಡಿದರು.


ಜಗತ್ತಿನಲ್ಲಿಯೇ ಭಾರತ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಾಹನ ದುರಂತಗಳು ಸಂಭವಿಸುತ್ತಿದೆ. ಪ್ರತೀ ಗಂಟೆಗೆ ದೇಶದಲ್ಲಿ ೧೬ ಜನರು ವಾಹನ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತೀ ನಿತ್ಯ ೩೬೦ ಜನರು ಸಾವಿಗೀಡಾಗುತ್ತಿದ್ದಾರೆ. ವರ್ಷಕ್ಕೆ ೧.೫೦ ಲಕ್ಷ ಜನರು ವಾಹನ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು ಈ ಪ್ರಮಾಣ ಪ್ರತೀ ವರ್ಷ ಶೇ.೮ ರಷ್ಟು ಹೆಚ್ಚುತ್ತಲೇ ಇದೆ ಎಂದು ನಂದ ಮಾಹಿತಿ ನೀಡಿದರು.


ಇಂಥ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದು, ೧೪ ವರ್ಷದೊಳಗಿನ ಮಕ್ಕಳೂ ವಾಹನ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಪ್ರಮಾಣ ಹೆಚ್ಚುತ್ತಲೇ ಇರುವುದು ವಿಷಾಧನೀಯ. ಸೀಟ್ ಬೆಲ್ಟ್ ಹಾಕದೇ ಇರುವುದು, ವಾಹನ ಚಾಲನೆ ಸಂದರ್ಭ ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್, ಮಧ್ಯಪಾನ ಮಾಡಿ ಚಾಲನೆ, ನಿರ್ಲಕ್ಷ್ಯದ ಚಾಲನೆ, ವೀಲಿಂಗ್, ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಕೂಡ ಅಪಘಾತಗಳು ನಿಯಂತ್ರಣಕ್ಕೆ ಬಾರದಿರಲು ಮುಖ್ಯ ಕಾರಣವಾಗಿದೆ ಎಂದು ನಂದ ವಿಶ್ಲೇಷಿಸಿದರು.


ಸಂಚಾರ ನಿಯಮಗಳ ಉಲ್ಲಂಘನೆಗೆ ಕಠಿಣ ಕ್ರಮಗಳು ಪೊಲೀಸ್ ಇಲಾಖೆಯಲ್ಲಿದೆ. ಆದರೆ, ಇಂಥ ಪರಿಸ್ಥಿತಿಗೆ ಅವಕಾಶ ಮಾಡಿಕೊಡದೇ ನಾಗರಿಕ ಹೊಣೆಗಾರಿಕೆಯಿಂದ ಪ್ರತೀಯೋರ್ವರೂ ವಾಹನ ಚಾಲನೆ ಮತ್ತು ಸಂಚಾರಿ ನಿಯಮ ಪಾಲಿಸದ್ದಲ್ಲಿ ವಿದೇಶಗಳಂತೆ ಭಾರತ ಕೂಡ ಅಪಘಾತಗಳ ಸಂಖ್ಯೆಯನ್ನು ಕಡಮೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.


ರೋಟರಿ ವಲಯ ಸಹಾಯಕ ಗವರ್ನರ್ ದೇವಣಿರ ತಿಲಕ್ ಮಾತನಾಡಿ, ರಸ್ತೆಗಳು ಉತ್ತಮ ಸ್ಥಿತಿಯಲ್ಲಿದೆ ಎಂದ ಕೂಡಲೇ ಅದು ವೇಗದ ಚಾಲನೆಗೆ ನೀಡಿದ ಪರವಾನಗಿ ಅಲ್ಲ. ಉತ್ತಮ ರಸ್ತೆಗಳಲ್ಲಿ ನಿಯಮಬದ್ದ ಚಾಲನೆ ಮಾಡಿದರೆ ಎಲ್ಲರಿಗೂ ಉತ್ತಮ ಎಂದು ಹೇಳಿದರು.


ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್ ಮಾತನಾಡಿ, ಸಂಚಾರದ ಬಗ್ಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳ ಮೂಲಕ ಕಾರ್ಯಪ್ರವೃತ್ತವಾಗಿದೆ. ಶಾಲಾ ಕಾಲೇಜುಗಳಲ್ಲಿಯೂ ಮುಂದಿನ ದಿನಗಳಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಜಾಗ್ರತಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.


ರೋಟರಿ ಸದಸ್ಯರು, ಮಡಿಕೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ನಿರ್ದೇಶಕರಾದ ಎ.ಕೆ.ವಿನೋದ್, ಎಚ್.ಟಿ.ಅನಿಲ್, ಮಡಿಕೇರಿ ರೋಟರಿ ಅಧ್ಯಕ್ಷೆ ಗೀತಾ ಗಿರೀಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.