ಉಪ್ಪಿನಂಗಡಿ: ರಾ.ಹೆ. 75ರ ಚತುಷ್ಪಥ ಕಾಮಗಾರಿಗಾಗಿ ಬಜತ್ತೂರು ಗ್ರಾಮದ ನೀರಕಟ್ಟೆ-ಬಾರಿಕೆ ಸಂಪರ್ಕ ಬೆಸೆಯುತ್ತಿದ್ದ ಕಾಲುಸಂಕ (ಕಿರು ಸೇತುವೆ )ಯನ್ನು ಕಿತ್ತು ಹಾಕಲಾಗಿದ್ದು, ಬಳಿಕ ಪರ್ಯಾಯ ವ್ಯವಸ್ಥೆ ಮಾಡದಿರುವ ಕಾರಣ ಸ್ಥಳೀಯರು ಸಮಸ್ಯೆಗೆ ಸಿಲುಕಿರುವ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾದ ಬೆನ್ನಿಗೆ ಇಲಾಖಾಧಿಕಾರಿಗಳು ಸ್ಪಂದಿಸಿದ್ದು, ತೋಡಿಗೆ ಮೋರಿ ಅಳವಡಿಸಿ ರಸ್ತೆಯನ್ನು ಸಂಚಾರ ಯೋಗ್ಯಗೊಳಿಸಲಾಗಿದೆ.
ನೀರಕಟ್ಟೆಯಿಂದ ಬಾರಿಕೆಗೆ ಹೋಗುವ ರಸ್ತೆಗೆ ಹೆದ್ದಾರಿ ಬದಿಯ ತೋಡಿನಿಂದ ಸಂಪರ್ಕ ಸಾಧಿಸಲು ಈ ಹಿಂದೆ ಕಿರು ಸೇತುವೆ ನಿರ್ಮಿಸಲಾಗಿದ್ದು, ಜನತೆ ಅದನ್ನು ನಿತ್ಯ ಬಳಸುತ್ತಿದ್ದರು. ಹೆದ್ದಾರಿ ಅಗಲೀಕರಣಕ್ಕೆ ಈ ಸೇತುವೆ ಇದ್ದ ಸ್ಥಳವೂ ಒಳಪಟ್ಟಿದ್ದರಿಂದ ಸೇತುವೆಯನ್ನು ಕಿತ್ತು ಹಾಕಲಾಗಿತ್ತು. ಆದರೆ ಬಳಿಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಪರಿಸರದ ನಿವಾಸಿಗರು ಸಮಸ್ಯೆಗೀಡಾಗಿದ್ದರು. ಈ ಬಗ್ಗೆ ವಿಜಯವಾಣಿ ಸಚಿತ್ರ ವರದಿ ಪ್ರಕಟಿಸಿತ್ತು.
ವರದಿಗೆ ತುರ್ತು ಸ್ಪಂದನೆ ನೀಡಿದ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ, ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅದರಂತೆ ಕಾರ್ಯಪ್ರವೃತರಾದ ಹೆದ್ದಾರಿ ಇಲಾಖಾಧಿಕಾರಿಗಳು ಸಂಬಂಧಿತ ಗುತ್ತಿಗೆದಾರರ ಮೂಲಕ ತೋಡಿಗೆ ಮೋರಿ ಅಳವಡಿಸಿ, ಮೇಲ್ಮೈಗೆ ಡಾಂಬರು ಮಿಶ್ರಿತ ಜಲ್ಲಿ ಹಾಕಿ ಸಂಚಾರ ಯೋಗ್ಯವನ್ನಾಗಿಸಿದರು.
ಮೊದಲಿದ್ದ ಕಾಲುಸಂಕವನ್ನು ತೆರವುಗೊಳಿಸಿದ್ದಕ್ಕಾಗಿ ಅಲ್ಲಿ ಪರ್ಯಾಯ ಸಂಪರ್ಕ ವ್ಯವಸ್ಥೆಯನ್ನು ಮಾಡಬೇಕೆಂದು ಸತತ ಮನವಿ ಸಲ್ಲಿಸಿದ್ದೆವು. ಆದರೆ ನಮ್ಮ ಮನವಿ ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಇದೀಗ ವಿಳಂಬವಾದರೂ ನಮಗೆ ನ್ಯಾಯ ದೊರಕಿದೆ ಎಂಬ ಸಂತೋಷ ನಮಗಾಗಿದೆ. ಸಮಸ್ಯೆಯನ್ನು ಹೊರ ಜಗತ್ತಿಗೆ ಅನಾವರಣಗೊಳಿಸಿದ ವಿಜಯವಾಣಿಗೆ, ತಕ್ಷಣ ಸ್ಪಂದಿಸಿದ ಪುತ್ತೂರು ಸಹಾಯಕ ಕಮಿಷನರ್‌ಗೆ ಬಾರಿಕೆ ಪರಿಸರದ ಜನತೆ ಋಣಿಗಳಾಗಿದ್ದೇವೆ. - ಕಿಶೋರ್, ಸ್ಥಳೀಯ ನಿವಾಸಿ, ಸಾಮಾಜಿಕ ಕಾರ್ಯಕರ್ತ