ಸೋಮವಾರಪೇಟೆ : ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣವೊಂದೇ ಸೂಕ್ತ ಮಾರ್ಗವೆಂದು ಶಾಸಕ ಮಂತರ್‌ಗೌಡ ಅಭಿಪ್ರಾಯಿಸಿದರು.
ಸಮೀಪದ ಬಜೆಗುಂಡಿ ಗ್ರಾಮದ ಖಿಳಾರಿಯ ಶಾಫಿ ಜುಮಾ ಮಸೀದಿ ಆಡಳಿತ ಮಂಡಳಿ, ಹಯಾತುಲ್ ಇಸ್ಲಾಂ ಅರೇಬಿಕ್ ಮದರಸ ಸಹಯೋಗದಲ್ಲಿ ಮಸೀದಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯೆಯೇ ನಿಜವಾದ ಸಂಪತ್ತು. ವಿದ್ಯೆಯನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ವಿದ್ಯೆಯಿಂದ ಕನಸುಗಳನ್ನು ನನಸು ಮಾಡಿಕೊಳ್ಳಬಹುದು. ಹಾಗಾಗಿ ಮಕ್ಕಳಿಗೆ ಪಾಲಕರು ಉನ್ನತ ಶಿಕ್ಷಣ ಕೊಡಿಸಬೇಕು. ಗುಣಮಟ್ಟದ ಉಚಿತ ಶಿಕ್ಷಣ ನೀಡಲು ಸರ್ಕಾರ ಯೋಜನೆಗಳನ್ನು ರೂಪಿಸಿದ್ದು, ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕುವ ಸಮಾಜ ನಿರ್ಮಾಣ ಮಾಡಲು ತಮ್ಮ ಪ್ರಯತ್ನ ಮುಂದುವರಿಸಬೇಕು. ಹಬ್ಬಹರಿ ದಿನಗಳನ್ನು ಆಚರಿಸುವ ಮೂಲಕ ಒಗ್ಗಟ್ಟು ಗಟ್ಟಿಗೊಳಿಸಿಕೊಳ್ಳಬೇಕು. ಕಷ್ಟಸುಖದಲ್ಲಿ ಜನಾಂಗದವರು ಭಾಗಿಯಾಗಬೇಕು ಎಂದು ಕಿವಿ ಮಾತು ಹೇಳಿದರು.
ಮಸೀದಿಯ ಧರ್ಮಗುರು ಉಬೈದ್ ಫೈಜಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಶಾಂತಿಯುತ, ಸೌಹಾರ್ದ ಬದುಕು ಕಂಡವರು. ಅನಾಥರು, ಅಬಲೆಯರು, ಮಹಿಳೆಯರು ಹಾಗು ಹಿರಿಯರಿಗೆ ಗೌರವ ನೀಡುವುದನ್ನು ಕಲಿತವನು ತಮ್ಮ ನಿಜವಾದ ಅನುಯಾಯಿ ಎಂದು ನಂಬಿದ್ದರು. ಅವರ ಆದರ್ಶಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದರು.
ಇದೇ ಸಂದರ್ಭ ಶಾಸಕ ಡಾ. ಮಂತರ್ ಗೌಡ ಹಾಗು ಸೋಮವಾರಪೇಟೆ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಂ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ಸಮುದಾಯದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ದಫ್, ಗಾಯನ, ಭಾಷಣ ಸ್ಪರ್ಧೆ ನಡೆಯಿತು.
ಮಸೀದಿಯ ಅಧ್ಯಕ್ಷ ಕೆ.ಎ.ಯಾಕೂಬ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಗುರು ಸಮೀರ್ ಫೈಜಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಹನೀಫ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸುಲೈಮನ್, ಕಾರ್ಯದರ್ಶಿ ನಿಯಾಜ್, ಗೌರವಾಧ್ಯಕ್ಷ ಅಬ್ದುಲ್ ಖಾದರ್ ಮೇಸ್ತ್ರಿ, ಪದಾಧಿಕಾರಿಗಳಾದ ಮುಸ್ತಾಫ, ಮುನೀರ್, ಇಬ್ರಾಹಿಂ, ಅಬ್ದುಲ್ ರೆಹಮನ್, ಅಬ್ಬಾಸ್ ಇದ್ದರು.